

ಕೊನೇರಿ ಹೊಂಡಕ್ಕೆ ಬಿದ್ದಿದ್ದ ಬಾಲಕ ಶವವಾಗಿ ಪತ್ತೆ
ಗದಗ: ಇಲ್ಲಿನ ಕೊನೇರಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಕಣ್ಮರೆ ಅಗಿದ್ದ ಒಂಬತ್ತು ವರ್ಷದ ಬಾಲಕ ಅಶೋಕನ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಬೆಳಗ್ಗೆ ಹೊರ ತೆಗೆದರು.
ಗಂಗಾಪುರ ಪೇಟೆಯ ನಿವಾಸಿ ಅಶೋಕ ಭಾನುವಾರ ಮಧ್ಯಾಹ್ನ ಕೊನೇರಿ ಹೊಂಡದ ಮೆಟ್ಟಿಲುಗಳ ಮೇಲೆ ಸ್ನೇಹಿತರ ಜತೆಗೆ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಇನ್ನಿಬ್ಬರು ಬಾಲಕರು ಕಿರುಚುತ್ತ ಹೊರ ಬಂದು ಜನರಿಗೆ ವಿಷಯ ತಿಳಿಸಿದ್ದರು.
ತಕ್ಷಣವೇ ಯುವಕರ ತಂಡ ಹೊಂಡಕ್ಕೆ ಜಿಗಿದು ಬಾಲಕನ ರಕ್ಷಣೆಗೆ ಪ್ರಯತ್ನಿಸಿತು. ಇವರ ಜತೆಗೆ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಜತೆಯಾದರು. ಆದರೆ, ಈ ಹೊಂಡದಲ್ಲಿ ಗಣಪತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸರ್ಜನೆ ಮಾಡಿದ್ದರಿಂದ ಕೆಸರು ತುಂಬಿತ್ತು. ಜತೆಗೆ ಭಾನುವಾರ ಸಂಜೆ ವೇಳೆಗೆ ಮಳೆ ಆರಂಭಗೊಂಡಿದ್ದರಿಂದ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಸೋಮವಾರ ಮತ್ತೇ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಬಾಲಕನ ಮೃತ ದೇಹವನ್ನು ಪತ್ತೆಹಚ್ಚಿದರು.
ತಂದೆ ತಾಯಿ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಬಾಲಕ ಅಕಾಲಿಕವಾಗಿ ಸಾವನ್ನಪ್ಪಿದ್ದಾನೆ. ಇದನ್ನು ಕಂಡು ಸ್ಥಳಿಯರು ಮರುಗಿದರು. ಅಶೋಕ ಸೆ.30ರಂದು ಜನಿಸಿದ್ದು, ಆತನ ಜನ್ಮದಿನ ಆಚರಿಸಲು ಅಜ್ಜಿ ಎರಡು ದಿನ ಹಿಂದಿನಿಂದಿಲೇ ಸಂಭ್ರಮದ ಸಿದ್ಧತೆ ಆರಂಭಿಸಿದ್ದರು. ಆದರೆ, ಜನ್ಮದಿನದಂದೇ ಶವವಾಗಿ ಪತ್ತೆಯಾದ ಮೊಮ್ಮಗನನ್ನು ಕಂಡು ಅಜ್ಜಿ ಎದೆಬಡಿದುಕೊಂಡು ಅಳುತ್ತಿದ್ದ ದೃಶ್ಯ ಎಲ್ಲರು ಮರುಗಿದರು.