ಕರಿಯಮ್ಮ ದೇವಿಯ 96ನೇ ಜಾತ್ರಾ ಮಹೋತ್ಸವ

27GDG04
Published on
ಗದಗ: ‘ಕರಿಯಮ್ಮ ದೇವಿಯ 96ನೇ ಜಾತ್ರಾ ಮಹೋತ್ಸವ ಹಾಗೂ 25ನೇ ವರ್ಷದ ರಜತ ಮಹೋತ್ಸವಕ್ಕೆ ಸಂಬಂಧಿಸಿದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮಾರ್ಚ್‌ 28ರಿಂದ 31ರವರೆಗೆ ನಡೆಯಲಿವೆ’ ಎಂದು ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿ ಗೌರವಾಧ್ಯಕ್ಷ ಎಲ್‌.ಡಿ.ಚಂದಾವರಿ ತಿಳಿಸಿದರು.
‘ಶುಕ್ರವಾರ ಜಾತ್ರಾ ಮಹೋತ್ಸವ ಸಮಾರಂಭಗಳು ಪ್ರಾರಂಭಗೊಳ್ಳಲಿದ್ದು, ಬೆಳಿಗ್ಗೆ 9ಕ್ಕೆ ಕರಿಯಮ್ಮದೇವಿ ಬೆಳ್ಳಿ ಉತ್ಸವ ಮೂರ್ತಿ ದರ್ಶನ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಶುಕ್ರವಾರ ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗೋಲಿ ಸ್ಪರ್ಧೆ, ವಚನ ಗಾಯನ ಸ್ಪರ್ಧೆಗಳು ನಡೆಯಲಿವೆ. ಕರಿಯಮ್ಮ ದೇವಿ ಬಡಾವಣೆ ಸುಧಾರಣಾ ಸಮಿತಿಯ ಅಧ್ಯಕ್ಷ ಸಿ.ಕೆ.ಮಾಳಶೆಟ್ಟಿ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು’ ಎಂದು ತಿಳಿಸಿದರು.
‘ಮಾರ್ಚ್‌ 29ರಂದು ಬೆಳಿಗ್ಗೆ 7ಕ್ಕೆ ಚಂಡಿಕಾ ಹೋಮ ನಡೆಯಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಜಾತ್ರಾ ಸಮಿತಿ ಅಧ್ಯಕ್ಷ ಎ.ಟಿ.ನರೇಗಲ್ಲ ಅಧ್ಯಕ್ಷತೆ ವಹಿಸುವರು. ಜಿ.ಪಿ.ಪಾಟೀಲ, ಸಿ.ಕೆ.ಮಾಳಶೆಟ್ಟಿ, ಬಿ.ಆರ್‌.ಜಾಲಿಹಾಳ, ಡಾ. ಎನ್‌.ಎಂ.ಅಂಬಲಿಯವರ, ಡಾ. ರಾಜೇಂದ್ರ ಗಡಾದ, ಎಸ್‌.ಎ.ಹೊಳೆಯಣ್ಣವರ ಅತಿಥಿಗಳಾಗಿ ಭಾಗವಹಿಸುವರು’ ಎಂದು ತಿಳಿಸಿದರು.
‘ಮಾರ್ಚ್‌ 30ರಂದು ಮಧ್ಯಾಹ್ನ 2.30ಕ್ಕೆ ಮಂಗಳವಾದ್ಯಗಳೊಂದಿಗೆ ಕರಿಯಮ್ಮದೇವಿ ಪಾಲಕಿ ಉತ್ಸವವು ಕುಂಭ ಮೇಳ, ಚಂಡೆ ಮೇಳದೊಂದಿಗೆ ನಡೆಯಲಿದೆ. ಸಂಜೆ 5.30ಕ್ಕೆ ಮಹಾರಥೋತ್ಸವ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವ ಎಚ್‌.ಕೆ.ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಎಲ್‌.ಡಿ.ಚಂದಾವರಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಸಿ.ಪಾಟೀಲ ಹಾಗೂ ವಿಜಯಲಕ್ಷ್ಮಿ ಎಸ್‌.ದಿಂಡೂರ ಅತಿಥಿಗಳಾಗಿ ಭಾಗವಹಿಸುವರು’ ಎಂದರು.
‘ಮಾರ್ಚ್‌ 31ರಂದು ಮಧ್ಯಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಕಡುಬಿನ ಕಾಳಗ ನಡೆಯಲಿದೆ. ಸಂಜೆ 7ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ಶಂಕರಾನಂದ ಸ್ವಾಮೀಜಿ ವಹಿಸುವರು. ಶಿವಾನಂದ ಭಜಂತ್ರಿ ರಚಿಸಿರುವ ‘ನಮ್ಮೆಲ್ಲರ ಅಮ್ಮ ಕರಿಯಮ್ಮ’ ಕವನ ಸಂಕಲವನ್ನು ಮಾಜಿ ಶಾಸಕ ಡಿ.ಆರ್‌.ಪಾಟೀಲ ಬಿಡುಗಡೆ ಮಾಡುವರು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಅತಿಥಿಯಾಗಿ ಭಾಗವಹಿಸುವರು’ ಎಂದು ತಿಳಿಸಿದರು.
‘ಸ್ಮರಣ ಸಂಚಿಕೆ ರೂಪಿಸಲು ನೆರವು ನೀಡಿದ ದಾನಿಗಳನ್ನು ಪ್ರತಿದಿನ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.
ಸಿ.ಕೆ.ಮಾಳಶೆಟ್ಟಿ, ಎ.ಟಿ.ನರೇಗಲ್‌, ಶಶಿಧರ ದಿಂಡೂರ, ಜಿ.ಬಿ.ಗಾರವಾಡ, ಶಂಕರ್‌ ಹಾನಗಲ್‌, ಡಾ. ಎನ್‌.ಎಂ.ಅಂಬಲಿಯವರ, ಅಂದಾನಪ್ಪ ವಿಭೂತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net