ಗದಗ: ಗುರು ಎಂದರೆ ಮಾರ್ಗದರ್ಶಕ, ಬೆಳಕಿನ ದಾರಿಯನ್ನು ತೋರಿಸುವವನು. ಗುರಿ ಎಂದರೆ ಬದುಕಿನ ಉದ್ದೇಶ, ಸಾಧನೆ ಅಥವಾ ಕನಸು. ಅದರಿಂದ “ಗುರುವಿಲ್ಲದ ಗುರಿ ಅಸಾಧ್ಯ” ಜೀವನದಲ್ಲಿ ಒಬ್ಬ ಗುರು, ಮಾರ್ಗದರ್ಶಕ ಅಥವಾ ಪ್ರೇರಣಾದಾಯಕ ವ್ಯಕ್ತಿಯಿಲ್ಲದೆ ಮಕ್ಕಳು ಯಶಸ್ಸು ಸಾಧಿಸುವುದು ಕಷ್ಟ. ಗುರುವು ನಮ್ಮೊಳಗಿನ ಅಂದರೆ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವಂತೆ ಮಾಡುತ್ತಾನೆ. ನಾವು ಅಂಧಕಾರದಲ್ಲಿರುವಾಗ ಬೆಳಕಿನಂತೆ ದಾರಿ ತೋರಿಸುತ್ತಾನೆ. ತರಗತಿ ಹಾಗೂ ಸಮಾಜದಲ್ಲಿ ಕಡಿಮೆ ಸಾಧನೆಯ ಮೂಲಕ ನಿರಾಕರಣೆಯಾದ ಮಗು ಸೇರಿದಂತೆ ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ಕಂಡು, ಅವರು ಕಲಿಕೆಯ ಮೆಟ್ಟಿಲುಗಳನ್ನು ಹತ್ತುವಾಗ ತೊಂದರೆಗಳನ್ನು ಗುರುತಿಸಿ, ಮಗು ಯಾವಾಗ ಗುರುವಿನ ಜೊತೆಗೆ ಆತ್ಮೀಯತೆಯಿಂದ ತನ್ನ ತೊಂದರೆಗಳನ್ನು ಹಾಗೂ ಕಲಿಕಾಂಶಗಳ ಕುರಿತು ಮಾತನಾಡಿದಾಗ ಮಾತ್ರ ಗುರುವಿನ ಯಶಸ್ಸು ಸಾಧ್ಯ. ಜೊತೆಗೆ ಶಿಕ್ಷಕನ ಪಾಠಗಳು ಪೂರ್ವ ತಯಾರಿಯೊಂದಿಗೆ ಮಗುವಿನ ಭಾಗವಹಿಸುವಿಕೆಯೊಂದಿಗೆ ಅರಿವಿನ ಕಲಿಕೆಗಳಾಗಲಿ. ಶಾಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಉತ್ತಮ ಆರೋಗ್ಯ ಹಾಗೂ ಶುಭ್ರತೆಯಲ್ಲಿ ದೈವತ್ವವಿರುತ್ತದೆ ಎಂಬ ಭಾವನೆ ಮೂಡಿಸುವ ಕಾರ್ಯವಾಗಬೇಕು. ಶಿಕ್ಷಕರು ಪ್ರತಿನಿತ್ಯ ಹೊಸ ಜ್ಞಾನ ಕೌಶಲಗಳಿಗೆ ಅಪ್ಡೇಟ್ ಆಗುವುದರ ಜೊತೆಗೆ ಮಗುವನ್ನು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿರಲಿ, ಶಾಲೆ ಬಿಟ್ಟ ಮಕ್ಕಳನ್ನು ಸರಿಯಾದ ಕಲಿಕೆ ಮತ್ತು ಬೆಂಬಲದ ಮೂಲಕ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಗುರಿ ನಿಮ್ಮದಾಗಲಿ ಎಂದು ಮಾನ್ಯ ಸಿ ಎನ್ ಶ್ರೀಧರ್ ಜಿಲ್ಲಾಧಿಕಾರಿಗಳು ಇಂದು ನಡೆದ ಎಸ್ ಎಸ್ ಎಲ್ ಸಿ ಫಲಿತಾಂಶ ಮುನ್ನೋಟ ಸಭೆ 2026 ರಲ್ಲಿ ಫಲಿತಾಂಶ ವೃದ್ಧಿಗಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.