

ದತ್ತು ಕೇಂದ್ರ ಪರಿತ್ಯಕ್ತ ಮಕ್ಕಳಿಗೆ ಮಮತೆಯ ತೊಟ್ಟಿಲು : ಸುಮಾ
ಗದಗ: ಕುಟುಂಬವು ಮಗುವಿಗೆ ಪ್ರೀತಿ ಹಾಗೂ ಕಾಳಜಿಯನ್ನು ತೋರುವ ಆಶ್ರಯ ತಾಣಗಳಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿ ಮಗುವಿನ ಹಕ್ಕು ಆಗಿದೆ ಎಂದು ಗದಗ ಜಯೇಂಟ್ಸ್ ಗುಫ್ಸ್ ಆಫ್ ಸಖಿ-ಸಹೇಲಿಯ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ ಅಮೂಲ್ಯ (ಪಿ) ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಸಖಿ-ಸಹೇಲಿಯ ಸಪ್ತಾಹದ ಅಂಗವಾಗಿ ಎರ್ಪಡಿಸಿದ್ದ ಪರಿತ್ಯಕ್ತ ಮಕ್ಕಳ ಸೇವೆಯಲ್ಲಿ ತಮ್ಮನ್ನು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ದಾದಿಯರನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಸೇವಾ ಹೀ ಪರಮೋಧರ್ಮ ಎಂಬ ಧ್ಯೇಯದೊಂದಿಗೆ ಸೇವಾ ಭಾರತಿ ಹೆಸರೇ ಹೇಳುವಂತೆ ಸೇವಾ ಭಾರತಿ ಟ್ರಸ್ಟ್ ನೀಲಕ್ಕೂ ಅಮೂಲ್ಯವಾದ ಸೇವೆ ಸಲ್ಲಿಸುತ್ತಿದೆ. ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳಿಗೆ ಈ ದತ್ತು ಸ್ವೀಕಾರ ಕೇಂದ್ರ ಮಮತೆಯ ತೊಟ್ಟಿಲು ಒದಗಿಸಿ ಮಕ್ಕಳಿಗೆ ಆಸರೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಮಕ್ಕಳು ಕುಟುಂಬ ವ್ಯವಸ್ಥೆಯಲ್ಲಿ ಪ್ರೀತಿ-ಕಾಳಜಿಯಿಂದ ತಾಯಿಯ ರೂಪದಲ್ಲಿ ಈ ಸಂಸ್ಥೆಯಲ್ಲಿ ದಾದಿಯರು ಹಾಗೂ ಸಿಬ್ಬಂದಿ ಗಮನಾರ್ಹ ಕಾರ್ಯ ನಿರ್ವಹಿಸುತ್ತಿರುವರು. ದೇವರ ಸ್ವರೂಪವಾದ ಮಕ್ಕಳ ಲಾಲನೆ-ಪೋಷಣೆಗೆ ನಿಸ್ವಾರ್ಥ ಭಾವದಿಂದ ಶ್ರಮಿಸುವ ದಾದಿಯರ ಸೇವೆ ಅಮೂಲ್ಯವಾದದ್ದು ಎಂದು ಬಣ್ಣಿಸಿದರು.
ಮುಖ್ಯ ಅತಿಥಿ ನಿರ್ಮಲಾ ಪಾಟೀಲ ಮಾತನಾಡಿ ಮಕ್ಕಳು ಪ್ರೀತಿ ವಾತ್ಸಲ್ಯದಿಂದ ಬೆಳೆದು ಸಮಾಜ ಗುರುತಿಸಿ ಗೌರವಿಸುವಂತಾಗಬೇಕು. ಆ ಪ್ರಯತ್ನವು ಈ ಕೇಂದ್ರದಲ್ಲಿ ನಿತ್ಯವೂ ನಡೆಯುತ್ತಿದೆ. ಮಕ್ಕಳ ಬದುಕಿಗೆ ಅರ್ಥಪೂರ್ಣವಾದ ಬೆಳಕು ತೋರುವ ಪ್ರಯತ್ನ ಸಫಲತೆ ಪಡೆದಿದೆ ಎಂದರು.
ಇನ್ನೋರ್ವ ಅತಿಥಿ ಸುಗ್ಗಲಾ ಯಳಮಲಿ ಮಾತನಾಡಿ ಬಾಲ್ಯವು ನಗುವಿನಲ್ಲಿ ಇರಬೇಕು. ಆದರೇ ಕೆಲವು ಮಕ್ಕಳು ಇದರಿಂದ ವಂಚಿತರಾಗಿರುವರು. ಅಂತಹ ಮಕ್ಕಳನ್ನು ಪ್ರೀತಿಯಿಂದ ಮಡಿಲಿನಲ್ಲಿ ಎತ್ತಿಕೊಂಡು, ಎತ್ತಿ ಆಡಿಸಿ ಬೆಳೆಸುವ ದಾದಿಯರು ಮಾತೃ ಹೃದಯಿಗಳು ಎಂದರು.
ಮಕ್ಕಳ ಆರೈಕೆಯಲ್ಲಿ ಕಾರ್ಯದಲ್ಲಿ ತಮ್ಮನ್ನು ತೊಡಿಸಿಕೊಂಡಿರುವ ದಾರಿಯರಾದ ನೀಲವ್ವ ರೊಟ್ಟಿ, ಬಸವ್ವ ಶ್ಯಾವಿ, ಸರೋಜಾ ಕುಂದಗೋಳ, ಪಾರವ್ವ ಹಿರೇಮಠ, ಸುಂದರಾಬಾಯಿ ಅರವಟಗಿ, ರೊಟ್ಟಿ, ಸುವರ್ಣಾ ಬಾರಕೇರ, ಸುಶೀಲಾ ಬಡಿಗೇರ, ಕಮಲಾಕ್ಷೀ ಸರಳಾ ಅವರನ್ನು ಸಂಘಟನೆಯ ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಸಿಬ್ಬಂದಿಗಳಾದ ಪ್ರಮೋದ ಹಿರೇಮಠ, ಅಭಿಷೇಕ ಮಾಳೋದೆ, ಶ್ರೀಧರ ಕಾಂಬಳೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಚಂದ್ರಕಲಾ ಸ್ಥಾವರಮಠ ಪ್ರಾರ್ಥಿಸಿದರು. ರೇಖಾ ರೊಟ್ಟಿ ಸ್ವಾಗತಿಸಿ ವಂದಿಸಿದರು.