

ಗದಗ: ರಾಜ್ಯದ ವಿವಿಧ ಭಾಗಗಳಿಂದ ತಮ್ಮ ಬಳಿ ಚಿಕಿತ್ಸೆ ಪಡೆಯಲು ಆಗಮಿಸುವವರು ‘ಸ್ವ ಇಚ್ಛೆಯ ಚಿಕಿತ್ಸೆ’ ಪಡೆಯುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರ ತಾವು ಔಷಧಿ ನೀಡಲಾಗುತ್ತಿದೆ ಎಂದು ನರಗುಂದ ತಾಲೂಕಿನ ವಾಸನ ಗ್ರಾಮದ ಡಾ.ಹನಮಂತ ಮಳಲಿ ಹೇಳಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಮೂರೂವರೆ ದಶಕಗಳಿಂದಲೂ ನಾನು ಪಾರಂಪರಿಕ ವೈದ್ಯ ಪರಿಷತ್‌ನ ಅನುಮತಿ ಹಾಗೂ ಪ್ರಮಾಣ ಪತ್ರ ಪಡೆದು ಹಲವು ಕಾಯಿಲೆಗಳಿಗೆ ಔಷಧಿ ನೀಡುತ್ತಿದ್ದೇನೆ. ಆದರೆ, ಕಳೆದ ಕೆಲ ತಿಂಗಳಿAದ ಕೆಲವರು ಅಪಪ್ರಚಾರ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದರು.
ನಾನು ‘ಧನ್ವಂತರಿ’ ವಾರ ಆಗಿರುವ ಪ್ರತಿ ಬುಧವಾರ ಹಲವು ಕಾಯಿಲೆಗಳಿಗೆ ಔಷಧ ನೀಡುತ್ತೇನೆ. ಆರಂಭದಲ್ಲಿ ೪೦-೫೦ ಬರುತ್ತಿದ್ದು, ನನ್ನ ಬಳಿ ಔಷಧಿ ತೆಗೆದುಕೊಂಡು, ಗುಣಮುಖರಾದವರು ಮಾಡಿದ ಪ್ರಚಾರದ ಪರಿಣಾಮ ಇಂದು ಪ್ರತಿವಾರ ಕನಿಷ್ಟ ಸಾವಿರ ಜನ ಬರುತ್ತಿದ್ದಾರೆ. ಈವರೆಗೆ ತಾವು ಅಂದಾಜು ೬ ಲಕ್ಷ ಜನರಿಗೆ ಔಷಧಿ ನೀಡಿದ್ದೇನೆ. ಅದರಲ್ಲಿ ಪೊಲೀಸ್ ಇಲಾಖೆ, ಅಲೋಪಥಿಕ್ ವೈದ್ಯರು, ನ್ಯಾಯಾಂಗ ಇಲಾಖೆ ಅಷ್ಟೇ ಏಕೆ, ಕೆಲ ಸ್ವಾಮೀಜಿಗಳೂ ಸಹ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಕೆಲವರು ಅನಗತ್ಯವಾಗಿ ತಮಗೆ ತೊಂದರೆ ಕೊಡುವ ಉದ್ದೇಶದಿಂದಲೋ ಅಥವಾ ಯಾವ ಕಾರಣಕ್ಕೋ ಹೀಗೆ ತಮ್ಮ ವಿರುದ್ಧ ಕೇವಲ ಮೂಕ ಅರ್ಜಿಗಳನ್ನು ಕಳುಹಿಸಿ, ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ಉಚಿತ ಚಿಕಿತ್ಸೆಗೂ ಸಿದ್ಧ: ತಾವು ಹಲವು ಬಡ ರೋಗಿಗಳಿಗೆ ಉಚಿತ ಔಷಧಿ ಕೂಡ ನೀಡಲು ಸಿದ್ಧನಿದ್ದೇನೆ. ಅಥವಾ ನಾನು ಈ ಬಗ್ಗೆ ಪುಸ್ತಕವನ್ನೂ ಬರೆದಿದ್ದು, ಅದರ ಪ್ರಕಾರ ಯಾವ ಕಾಯಿಲೆಗೆ ಏನು ಔಷಧಿ ತೆಗೆದುಕೊಳ್ಳಬೇಕು ಎಂಬುದನ್ನು ಸಹ ಅವರೇ ಮಾಡಿಕೊಳ್ಳಬಹುದು. ಇದರ ಜೊತೆಗೆ ಯಾವ ಕಾಯಿಲೆಗೆ ಔಷಧಿ ಹೇಗೆ ಮಾಡಿಕೊಳ್ಳಬೇಕು, ಅದಕ್ಕೆ ಎಲ್ಲಿ ಕಚ್ಚಾ ವಸ್ತುಗಳು ಸಿಗುತ್ತವೆ ಎಂಬುದರ ಮಾಹಿತಿ ನೀಡಲು ಕೂಡ ತಾವು ಸಿದ್ಧರಿದ್ದೇವೆ. ನಾನು ಯಾವುದೇ ವಾಣಿಜ್ಯ ಉದ್ದೇಶದಂದ ಈ ಔಷಧಿ ನೀಡುತ್ತಿಲ್ಲ. ಒಟ್ಟಿನಲ್ಲಿ ದೇಶವು ರೋಗಮುಕ್ತ ಆಗಿ, ಸ್ವಾಸ್ಥö್ಯ ಸಮಾಜ ನಿರ್ಮಾಣವಷ್ಟೇ ನಮ್ಮ ಮೂಲ ಉದ್ದೇಶ ಎಂದು ಡಾ.ಹನಮಂತ ಮಳಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಹಿಂದೆ ಆಯುಷ್ ಇಲಾಖೆಗೂ ದೂರು ನೀಡಿದ್ದರು. ಅವರೆಲ್ಲರೂ ಬಂದು ತಪಾಸಣೆ ಮಾಡಿದ್ದಾರೆ. ಆಗಲೂ ಅವರಿಗೆ ಔಷಧದ ಬಗ್ಗೆ ನೈಜತೆ ತಿಳಿದು, ಸುಮ್ಮನಾಗಿದ್ದಾರೆ. ಅದರಲ್ಲಿ ಏನಾದರೂ ದೋಷ ಇದ್ದಿದ್ದರೆ ಕ್ರಮ ಕೈಗೊಳ್ಳುತ್ತಿದ್ದರು ಎಂದ ಅವರು, ಇನ್ನು ಮುಂದೆ ತಮ್ಮ ಬಳಿ ಚಿಕಿತ್ಸೆ ಪಡೆಯಲು ಆಗಮಿಸುವವರು ‘ಸ್ವ ಇಚ್ಛೆಯ ಚಿಕಿತ್ಸೆ’ ಪಡೆಯುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರ ತಾವು ಔಷಧಿ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.