

ವಿಜಯವಾಣಿ ಸುದ್ದಿಜಾಲ ಗದಗ
ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳ ತಾಯಿ ಬೇರು ಇದ್ದಂತೆ. ಭಾವಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಶಿಕ್ಷಕ ವೃತ್ತಿಯ ಪಾವಿತ್ರ‍್ಯತೆ ಅರಿಯಬೇಕು ಎಂದು ಅರಟಾಳ ರುದ್ರಗೌಡ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ಎಸ್. ಎಚ್. ರಾಮದುರ್ಗ ಹೇಳಿದರು.
ನಗರದ ಅರಟಾಳ ರುದ್ರಗೌಡ ಡಿ.ಇಡಿ ಕಾಲೇಜಿನಲ್ಲಿ ಶನಿವಾರ ಜರುಗಿದ ೨೦೨೩-೨೪ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಮಾಜಕ್ಕೆ ಸೃಜನಶೀಲ, ಕ್ರಿಯಾಶೀಲ ಶಿಕ್ಷಕರ ಅವಶ್ಯಕತೆ ಇದೆ. ವಿಶೇಷವಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾಗುವ ಡಿ.ಇಡಿ ಪ್ರಶಿಕ್ಷಣಾರ್ಥಿಗಳು ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರೊಡನೆ ಮಕ್ಕಳಾಗಿ ಬೆರೆತಾಗ ಮಾತ್ರ ಒಳ್ಳೆಯ ಶಿಕ್ಷಕರಾಗಲು ಸಾಧ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣವಾಗುವಂತೆ ಶಿಕ್ಷಕ ಅವರನ್ನು ರೂಪುಗೊಳಿಸಬೇಕು. ಬೋಧನೆಯು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬೇಕು ಎಂದರು.
ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ. ಕೆ. ಬಂಡಿಹಾಳ ಮಾತನಾಡಿ, ಶಿಕ್ಷಕ ವೃತ್ತಿಯು ಕೇವಲ ವೇತನ ಪಡೆಯುವ ಕೆಲಸವಾಗದೇ ಮಹತ್ವದ ಹೊಣೆಗಾರಿಕೆ ಇರುವ ಹುದ್ದೆಯಾಗಿದೆ. ಪ್ರಶಿಕ್ಷಣಾರ್ಥಿಗಳು ತಾವು ಮೊದಲು ಉತ್ತಮ ಚಾರಿತ್ರ‍್ಯ ಬೆಳೆಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಬೇಕು ಎಂದರು.
ಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ಗಿಡ್ಡಕೆಂಚಣ್ಣವರ ಮಾತನಾಡಿ, ಬಿ.ಇಡಿ, ಡಿ.ಇಡಿ ಶಿಕ್ಷಣ ಹುದ್ದೆಗಳನ್ನು ಪಡೆದು ಸರ್ಕಾರಿ ಅಥವಾ ನಿರ್ದಿಷ್ಠ ಕೆಲಸಕ್ಕಾಗಿ ಕಾಯುತ್ತಾ ಕೂರುವ ಬದಲು ನಿರಂತರವಾಗಿ ಬೋಧನೆಯಲ್ಲಿ ತೊಡಗುವ ಮೂಲಕ ಶಿಕ್ಷಕರು ತಮ್ಮ ವೃತ್ತಿಗೆ ಸಮರ್ಥವಾಗಬೇಕು. ಕಲಿಯುವಿಕೆ ನಿರಂತರ ಪ್ರಕ್ರಿಯೆಯಾಗಿದೆ. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸತತವಾಗಿ ಹೊಸದನ್ನು ಕಲಿಯಬೇಕು ಎಂದರು.
ಕಾಲೇಜಿನ ಸಿಬ್ಬಂದಿಗಳಾದ ಅಶೋಕ ಇರಕಲ್, ಎಸ್.ಎಚ್ ಬಚನಳ್ಳಿ ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.