

ವಿಜಯವಾಣಿ ಸುದ್ದಿಜಾಲ ಗದಗ
ಗದಗ ನಗರದ ಎಸ್ ಎಸ್ ಕೆ ಶಿಕ್ಷಣ ಸಂಸ್ಥೆಯ ಸಮೀಪದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2021 ಜುಲೈ 17ರಂದು ಭೀಷ್ಮ ಕೆರೆ ಎದುರಿನ ಎಸ್ ಎಸ್ ಕೆ ಶಿಕ್ಷಣ ಸಂಸ್ಥೆಯ ತ್ರಿಶಕ್ತಿ ಮಲ್ಟಿಜಿಮ್ ಸಮೀಪದಲ್ಲಿ ಮುತ್ತು ಚಲವಾದಿ ಎನ್ನುವ ಯುವಕನನ್ನು ಫಕೀರೇಶ ಬಸವರಾಜ ಕೊರಿಶೆಟ್ಟರ್ ಮತ್ತು ಪವನ ಯಮನಪ್ಪ ಸಕ್ರಿ ಕೂಡಿಕೊಂಡು ಮಾರಕಾಸ್ತ್ರ ಬಳಸಿ ಭೀಕರವಾಗಿ ಕೊಲೆ ಮಾಡಿದ್ದರು.
ಈ ಬಗ್ಗೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೊದಲ ಆರೋಪಿ ಫಕೀರೇಶಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 3 ಲಕ್ಷ ರೂ. ದಂಡ, 2ನೆ ಆರೋಪಿ ಪವನಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶೆ ರಾಜೇಶ್ವರಿ ಶೆಟ್ಟಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಮಲ್ಲಿಕಾರ್ಜುನ ದೊಡ್ಡಗೌಡ್ರ ವಾದ ಮಂಡಿಸಿದರು.