

ವಿಜಯವಾಣಿ ಸುದ್ದಿಜಾಲ ಗದಗ
ಪ್ರೀತಿಸಿ ಮದುವೆಯಾದ ಹೆಂಡತಿ ಮತ್ತು ಆಕೆಯ ಕುಟುಂಬದ ಸದಸ್ಯರೇ ಮತಾಂತರಕ್ಕೆ ಪ್ರಯತ್ನಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಬೆಟಗೇರಿ ಗಾಂಧಿ ನಗರ ಸೆಟಲ್ಮೆಂಟ್ ಪ್ರದೇಶದ ನಿವಾಸಿ ವಿಶಾಲಕುಮಾರ್ ಪರಶುರಾಮ ಗೋಕಾವಿ (21) ಎಂಬ ಯುವಕ ದೂರು ನೀಡಿದ್ದು, ನನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾನೆ.
ವಿಶಾಲಕುಮಾರ್ ಕಳೆದ ಮೂರು ವರ್ಷಗಳಿಂದ ಕುರಹಟ್ಟಿ ಪೇಟೆಯ ತಹಸೀನ್ ಹೊಸಮನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಮುಸ್ಲಿಂ ಧರ್ಮದ ಯುವತಿ ಪ್ರೀತಿಯನ್ನು ತಮ್ಮ ಪೋಷಕರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ವಿಶಾಲಕುಮಾರ್ ಈ ವಿಷಯವನ್ನು ಮನೆಯವರಿಂದ ಮುಚ್ಚಿದ್ದನು ಎನ್ನಲಾಗಿದೆ. 2024ರ ನವೆಂಬರ್ 26 ರಂದು ಗದಗ ಸಬ್ ರೆಜಿಸ್ಟರ್ ಕಚೇರಿಯಲ್ಲಿ ವಿವಾಹ ಮಾಡಿಕೊಂಡಿದ್ದರು. ಮದುವೆ ವಿಷಯ ತಿಳಿದ ನಂತರ ತಹಸೀನ್ ಮತ್ತು ಆಕೆಯ ತಾಯಿ ಬೇಗಂ ಬಾನು ಅವರು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುವಂತೆ ವಿಶಾಲಕುಮಾರ್ಗೆ ಒತ್ತಾಯಿಸಿದ್ದರು ಎನ್ನಲಾಗಿದೆ. ಸಾಮರಸ್ಯದಿಂದ ಇರಬೇಕೆಂಬ ಉದ್ದೇಶದಿಂದ ವಿಶಾಲಕುಮಾರ್ ಈ ಮದುವೆಗೆ ಒಪ್ಪಿಕೊಂಡರು. ಇದನ್ನೇ ಬಂಡವಾಳ ಮಾಡಿಕೊಂಡ ಬೇಗಂ ಬಾನು, ಮುಸ್ಲಿಂ ಧರ್ಮದ ಪ್ರಕಾರ 2025ರ ಏ. 25ರಂದು ಮುಳಗುಂದ ನಾಕಾ ಬಳಿ ಇರುವ ಉಮರ್ ಬೀನ್ ಕತ್ತಾಬ್ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಈ ವೇಳೆ ತನಗೆ ತಿಳಿಯದಂತೆ ತನ್ನ ಹೆಸರನ್ನು ಬದಲಾಯಿಸಲಾಗಿದೆ ಎಂದು ವಿಶಾಲಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ಮದುವೆಗೂ ಮುನ್ನವೇ ತಹಸೀನ್ ಮತ್ತು ಅವರ ತಾಯಿ ಬೇಗಂ ಬಾನು ಮುಸ್ಲಿಂ ಜಮಾತ್ಗೆ ಹೋಗುವಂತೆ ಒತ್ತಾಯಿಸುತ್ತಿದ್ದರು ಮತ್ತು ಮುಸ್ಲಿಂ ಧರ್ಮವನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದರು ಎಂದು ವಿಶಾಲಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಮುಸ್ಲಿಂ ಸಂಪ್ರದಾಯಂಅತೆ ಮದುವೆಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಷಯ ವಿಶಾಲಕುಮಾರ್ ಅವರ ಕುಟುಂಬದವರಿಗೂ ತಲುಪಿದೆ. ವಿಶಾಲಕುಮಾರ್ ಅವರ ತಾಯಿ ಮಂಜುಳಾ ಗೋಕಾವಿ ಅವರು ಹಿಂದೂ ಸಂಪ್ರದಾಯದಂತೆಯೂ ಮದುವೆ ಮಾಡುವ ವಿಷಯವನ್ನು ತಹಸೀನ್ ಕುಟುಂಬವನ್ನು ಸಂಪಕಿರ್ಸಿ ಪ್ರಸ್ತಾಪಿಸಿದ್ದಾರೆ. ಕುಟುಂಬದ ಒಪ್ಪಿಗೆಯ ಮೇರೆಗೆ 2025 ಜೂ. 05ರಂದು ಗಾಂಧಿ ನಗರ ಸೆಟಲ್ಮೆಂಟ್ ನಗರದಲ್ಲಿನ ವಿಶಾಲಕುಮಾರ್ ಅವರ ಮನೆಯ ಎದುರು ಹಿಂದೂ ಸಂಪ್ರದಾಯದಂತೆ ಮದುವೆ ನಿಗದಿಪಡಿಸಲಾಗಿತ್ತು. ಆರಂಭದಲ್ಲಿ ಮದುವೆಗೆ ಒಪ್ಪಿಗೆ ನೀಡಿದ್ದ ತಹಸೀನ್, ನಂತರದಲ್ಲಿ ಕುಟುಂಬ ಮತ್ತು ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಹಸೀನ್ ಕಳೆದ ಒಂದು ತಿಂಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿಶಾಲಕುಮಾರ್ ತಿಳಿಸಿದ್ದಾರೆ.
ಪ್ರೀತಿಗೆ ಮಣಿದು ನಾನು ಮುಸ್ಲಿಂ ಧರ್ಮದ ಸಂಪ್ರದಾಯದಂತೆ ಬೇಷರತ್ ಮದುವೆಯಾಗಿದ್ದೇನು. ಆದರೆ ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ನಮ್ಮ ಕುಟುಂಬದ ಪ್ರಸ್ತಾವನೆಯನ್ನು ಅವರು ನಿರಾಕರಿಸಿದ್ದಾರೆ. ನನ್ನನ್ನೇ ಮುಸ್ಲಿಂ ಧರ್ಮಕ್ಕೆ ಪರಿವತಿರ್ಸುವ ಉದ್ದೇಶ ತಹಸೀನ್ ಕುಟುಂಬಕ್ಕೆ ಇದೆ ಎಂಬುದು ಸ್ಪಷ್ಟವಾಗಿದೆ ಎಂದು ವಿಶಾಲಕುಮಾರ್ ಆರೋಪಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಜು. 17 ರಂದು ಪ್ರಕರಣ ದಾಖಲಿಸಿದ್ದಾರೆ.