ಕೋವಿಡ್ ಸೋಂಕು ನಿಯಂತ್ರಣ ಹಾಗೂ ನಿರ್ವಹಣೆಗೆ ಸರ್ವ ಸನ್ನದ್ಧರಾಗಲು ಸೂಚನೆ: ಡಾ.ಎಚ್.ಕೆ.ಪಾಟೀಲ

_MG_2298
Published on

ಗದಗ: ಕೋವಿಡ್ ನೂತನ ಜೆಎನ್ 1 ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿವೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಸಮರ್ಪಕ ನಿರ್ವಹಣೆಗೆ ಸರ್ವಸನ್ನದ್ಧರಾಗುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

ಗದಗ  ಜಿಮ್ಸ್ ಆಸ್ಪತ್ರೆಯಲ್ಲಿ ಬುಧವಾರದಂದು ಕೋವಿಡ್ ನಿರ್ವಹಣೆಗಾಗಿ ಮಾಡಿಕೊಳ್ಳಲಾದ ವ್ಯವಸ್ಥೆಯನ್ನು ಪರಿಶೀಲಿಸಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು.  ಕಳೆದ ಬಾರಿಯ ಕೋವಿಡ್ ನಿರ್ವಹಣೆಯಲ್ಲಿ ಸೋಂಕಿತರಿಗೆ ಆದ ಆಕ್ಸಿಜನ್ ಪೂರೈಕೆಯ ಸಮಸ್ಯೆಯು ಮರುಕಳಿಸಬಾರದು. ಹಾಗೂ ಕೋವಿಡ್ ಚಿಕಿತ್ಸೆಗೆ ಮತ್ತು ಪರೀಕ್ಷೆಗೆ ಅಗತ್ಯವಿರುವ ಸಕಲ ಸಾಮಗ್ರಿಗಳ ಸಿದ್ಧತೆಯನ್ನು ಮಾಡಿಕೊಳ್ಳೂವಂತೆ ನಿರ್ದೇಶನ ನೀಡಲಾಗಿದೆ.

ಸದ್ಯ ಗದಗ ಜಿಮ್ಸ್ ನಲ್ಲಿರುವ 115 ವೆಂಟಿಲೇಟರ್ ಗಳ ಪೈಕಿ 78 ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 37 ವೆಂಟಿಲೇಟರ್‍ಗಳ ದುರಸ್ತಿ ಕಾರ್ಯವನ್ನು ಒಂದು ವಾರದೊಳಗಾಗಿ ಕೈಗೊಳ್ಳುವಂತೆ ತಿಳಿಸಲಾಗಿದೆ. ಗದಗ ಜಿಮ್ಸ್ ಆವರಣದಲ್ಲಿ 13 ಮತ್ತು 20 ಕೆ ಎಲ್‍ನ ಆಕ್ಸಿಜನ್ ಸಂಗ್ರಹ ಘಟಕಗಳು ನಿರ್ಮಾಣವಾಗಿವೆ ಹಾಗೂ ಆಕ್ಸಿಜನ್ ಜನರೇಶನ್ ಪ್ಲಾಂಟ್ ಕೂಡ ಕಾರ್ಯನಿರ್ವಹಿಸುತ್ತಿವೆ. ಈ ಆಕ್ಸಿಜನ್ ಜನರೇಶನ್ ಪ್ಲಾಂಟ್‍ನಿಂದ ಸಿಲೆಂಡರ್‍ಗಳಿಗೆ ಆಕ್ಸಿಜನ್ ತುಂಬಿಸಲು ಇರುವ ಸಾಧನ ಸಾಮಗ್ರಿಗಳನ್ನು ಶೀಘ್ರವೆ ಖರೀದಿಸಿ ಅಳವಡಿಕೆಗೆ ತಿಳಿಸಲಾಗಿದೆ.    

ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ ಆಕ್ಸಿಜನ್ ಸಂಗ್ರಹಕ್ಕಾಗಿ ಜಿಮ್ಸನಲ್ಲಿ 200 ಜಂಬೂ ಸಿಲೆಂಡರ್ ಇವೆ. ಜೊತೆಗೆ 10 ಹಾಗೂ 5 ಲೀಟರ್ ಸಾಮಥ್ರ್ಯದ ಆಕ್ಸಿಜನ್ ಕಾನ್ಸನ್ಟ್ರೇಟರ್‍ಗಳೂ ಸಹ ಲಭ್ಯವಿದ್ದು ಸೋಂಕಿತರ ಚಿಕಿತ್ಸೆಗೆ ಅಗತ್ಯಕ್ಕೆ ತಕ್ಕಂತೆ ಬಳಕೆಗೆ ಸೂಚಿಸಲಾಗಿದೆ ಎಂದರು.

ಜಿಮ್ಸ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆಗಾಗಿ 50 ಬೆಡ್ ಹಾಗೂ ತಾಲೂಕಾ ಆಸ್ಪತ್ರೆ ಮತ್ತು ಸಿಎಚ್‍ಸಿ ಆಸ್ಪತ್ರೆಗಳಲ್ಲಿ ತಲಾ 10 ಬೆಡ್‍ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗುವುದು.ಅಲ್ಲಿ ಚಿಕಿತ್ಸೆಗೆ  ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಕೋವಿಡ್ ಸಂಬಂಧಿತ ಮಾಹಿತಿಗಾಗಿ ಸಹಾಯವಾಣಿ ಶೀಘ್ರವೇ ಆರಂಭಿಸಲಾಗುವುದು ಎಂದು ಹೇಳಿದರು.  

ಜನಸಾಮಾನ್ಯರಿಗೆ ಕೋವಿಡ್ ಸೋಂಕಿನ ಚಿಕಿತ್ಸೆ ಸಮರ್ಪಕವಾಗಿ ದೊರೆಯಬೇಕು. ಯಾವುದೇ ಕಾರಣಕ್ಕೂ ತೊಂದರಯಾಗಬಾರದು. ಸುದ್ದಿ ಮಾಧ್ಯಮಗಳೂ ಕೋವಿಡ್ ಸಂಬಂಧಿತ ಊಹಾಪೋಹ ಸುದ್ದಿಗಳನ್ನು ಪ್ರಸಾರ ಮಾಡಬಾರದು. ಅಧಿಕೃತ ಮಾಹಿತಿಯನ್ನಷ್ಟೇ ಪ್ರಸಾರ ಮಾಡುವಂತೆ ಕೋರಿದರು.

ಗದಗ ಜಿಲ್ಲೆಯಲ್ಲಿ ಪ್ರತಿದಿನ 100 ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಇದರಲ್ಲಿ 70 ಆರ್‍ಟಿ ಪಿ ಸಿ ಆರ್ ಹಾಗೂ 30 ರ್ಯಾಟ್ ಪರೀಕ್ಷೆ ಒಳಗೊಂಡಿರುತ್ತದೆ. ಜಿಲ್ಲೆಯಲ್ಲಿ ಸದ್ಯ  2 ಪ್ರಕರಣಗಳು ಸಸ್ಪೆಕ್ಟೆಡ್ ಎಂದು ಗುರುತಿಸಲಾಗಿದ್ದು  ಪರೀಕ್ಷಾ  ವರದಿ ನಾಳೆ ಬರಲಿದೆ ಎಂದರು.

ಕೋವಿಡ್ ಪರೀಕ್ಷೆಗೆ ಅಗತ್ಯವಿರುವ ನುರಿತ ಸಿಬ್ಬಂದಿಗಳನ್ನು ಅಗತ್ಯಕ್ಕನುಸಾರ ತೆಗೆದುಕೊಳ್ಳಬೇಕು.ಹಾಗೂ ಚಿಕಿತ್ಸೆಗಾಗಿ ಎನ್‍ಎಚ್‍ಎಂನಿಂದ ನೇಮಕವಾದ ನರ್ಸಗಳನ್ನು ಒಂದು ವಾರದೊಳಗಾಗಿ ಒದಗಿಸಲಾಗುವುದು ಅಲ್ಲದೇ ಸೋಂಕಿತರ ಪ್ರಮಾಣ ಅಧಿಕವಾದಲ್ಲಿ ಜಿಲ್ಲಾಸ್ಪತ್ರೆಯ ಭದ್ರತೆಗಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನೇಮಕಗೊಳಿಸುವ ಬಗ್ಗೆ ಚರ್ಚಿಸಲಾಗಿದ್ದು ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಮ್ಸ್‍ದ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಎಸ್.ಎಸ್.ನೀಲಗುಂದ ಗಣ್ಯರಾದ ಬಿ.ಬಿ.ಅಸೂಟಿ ,ಅಶೋಕ ಮಂದಾಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net