ಮಹಿಳೆಯರ ಪಾತ್ರ ಅನನ್ಯ, ಅವರಿಂದಲೇ ಜೀವನಕ್ಕೆ ಜೀವಕಳೆ: ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ

04GDG05
Published on

ಗದಗ : ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ, ಜೀವನದಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದ್ದು ಅವರಿಂದಲೇ ಜೀವನಕ್ಕೆ ಜೀವಕಳೆ ಬರಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳಾದ ಸಿ.ಎನ್ ಶ್ರೀಧರ ಅವರು ನುಡಿದರು.

ಅವರು ದಿ.03 ರಂದು ಜಿಲ್ಲಾಡಳಿತ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಎಲ್ ಗುಂಜೀಕರ ಅವರ ನಿವೃತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರಿಗೆ ವಿಶೇಷ ಸೇವಾಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,

ಪುರುಷನ ಜೀವನದಲ್ಲಿ ತಾಯಿ, ಹೆಂಡತಿ, ಸಹೋದರಿ, ಸ್ನೇಹಿತೆ ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸಿ ಅವನ ಬದುಕನ್ನು ಹಸನಾಗಿಸುವ ಮಹಿಳೆ ಪುರುಷರಿಗಿಂತ ಹೆಚ್ಚಾಗಿ ಸಂಸಾರದ ಜವಾಬ್ದಾರಿಯನ್ನು ಹೊರುತ್ತಾಳೆ. ರವಿ ಗುಂಜೀಕರ ಅವರು ತಮ್ಮ ನಿವೃತ್ತಿ ಅಂಗವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿ ಅತೀ ಕಡಿಮೆ ಅವಧಿಯಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪದ್ಮಾವತಿ ಜಿ. ಮಾತನಾಡಿ, ಮಹಿಳೆಯರ ಪಾತ್ರವು ಸಮಾಜದಲ್ಲಿ ಅಂತರ್ಗತವಾಗಿದ್ದು, ಮೇಲ್ನೂಟಕ್ಕೆ ಅದರ ಮಹತ್ವ ಕಂಡುಬರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಿದ್ದು, ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಲು ಮಕ್ಕಳಿಗೆ ಬಾಲ್ಯದಲ್ಲೇ ಲಿಂಗತಾರತಮ್ಯದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳಾದ ಮೀನಾಕ್ಷಿ ಮಾತನಾಡಿ, ಸರ್ಕಾರಿ ನೌಕರರ ನಿವೃತ್ತಿ ಕಾರ್ಯಕ್ರಮಗಳು ತೀರಾ ಔಪಚಾರಿಕವಾಗಿರುತ್ತವೆ, ಆದರೆ ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ ಆಯೋಜಿಸಿರುವ ಅರ್ಥಪೂರ್ಣ ಕಾರ್ಯಕ್ರಮಗಳು ನಿಜಕ್ಕೂ ಬೆರಗು ಮೂಡಿಸಿವೆ. ಮಹಿಳಾ ಸಬಲೀಕರಣ ಎನ್ನುವುದು ಕೇವಲ ಮಾತಿನಲ್ಲಿ ಇರದೇ, ನಿಜಕ್ಕೂ ಜಾರಿಯಾಗಬೇಕು. ಇಂದಿಗೂ ಜೀವನದ ಅನೇಕ ನಿರ್ಧಾರಗಳಲ್ಲಿ ಪರಾವಲಂಬಿಯಾಗಿರುವ ಮಹಿಳೆಗೆ ಅವಳ ಆಶೋತ್ತರಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದರು.

ಸರ್ಕಾರಿ ಇಲಾಖೆಗಳು ಸೇರಿದಂತೆ ಹಲವು ರಂಗಗಳಲ್ಲಿ ವಿಶಿಷ್ಠ ಸೇವೆ ಸಲ್ಲಿಸಿರುವ 60 ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ, ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಯಶ್ರೀ ಶ್ರೀಗಿರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಅನುಪಮಾ ಅಂಗಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ರವಿ ಗುಂಜೀಕರ ಅಭಿಮಾನಿ ಬಳಗದ ಉಪಾಧ್ಯಕ್ಷರಾದ ಎಸ್.ಆರ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳಾರಿ ಸ್ವಾಗತಿಸಿದರು. ರವಿ ಗುಂಜೀಕರ ಅಭಿಮಾನಿ ಸಂಘದ ಗೌರವಾಧ್ಯಕ್ಷರಾದ ಡಿ.ಎಸ್ ತಳವಾರ, ಅಧ್ಯಕ್ಷರಾದ ಅರುಣಕುಮಾರ ಚವ್ಹಾಣ, ಕಾರ್ಯದರ್ಶಿ ಕೆ.ಎಫ್ ಹಳ್ಯಾಳ, ಆರ್ ಎಂ ನಿಂಬನಾಯ್ಕರ್, ಮಂಜು ಮಾನೆ, ಶಿವಾಜಿ ಪಾವನ ಸೇರಿದಂತೆ ರವಿ ಗುಂಜೀಕರ ಅಭಿಮಾನಿಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net