ಗಣಿತ ವಸ್ತು ಪ್ರದರ್ಶನ ಕೇವಲ ಪ್ರದರ್ಶನವಲ್ಲ ಪ್ರತಿಭೆಯ ನಿದರ್ಶನ: ಎಮ್. ಎಸ್. ಪೂಜಾರ್

WhatsApp Image 2023-12-29 at 3.52.51 PM
Published on

ಚಿಕ್ಕಟ್ಟಿ ಶಾಲೆಯಲ್ಲಿ ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅತಿಥಿಗಳಾಗಿ ಎಮ್. ಎಸ್. ಪೂಜಾರ್ ಅವರು ಕಾರ್ಯಕ್ರಮದ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಆಸಕ್ತಿ ಕೆರಳಿಸದೇ ಬೋಧಿಸಿದರೆ ಕಾಯಿಸದೆ ಕಬ್ಬಿಣವನ್ನು ಬಡಿದಂತೆ. ಸಂಖ್ಯೆಗಳಿಗೆ ಕೊನೆ ಎಂಬುವುದಿಲ್ಲ, ಗಣಿತ ಎಂಬುವುದು ಕಬ್ಬಿಣದ ಕಡಲೆಯಲ್ಲ ಅದು ಕಬ್ಬಿಣದ ರಸವಾಗಬೇಕು ಎಂದು ಗಣಿತದ ಸರಳತೆಯ ಬಗ್ಗೆ ಹೇಳುತ್ತಾ, ರೈತನಾದವನು ಹೊಲದಲ್ಲಿ ಬೆಳೆ ಬೆಳೆಯಲು ಹೇಗೆ ಭೂಮಿಯನ್ನು ಹದ ಮಾಡುತ್ತಾನೆಯೋ, ಅದೇ ತೆರನಾಗಿ ವಿದ್ಯಾರ್ಥಿಗಳ ಮನೋಭೂಮಿಕೆಯನ್ನು ತಿಳಿದು ಅವರ ಆಸಕ್ತಿ ಕೆರಳಿಸಿ ಸೂಕ್ತ ವಾತಾವರಣ ನೀಡಿದಾಗ ಗಣಿತ ಎಂಬ ವಿಷಯ ಸುಲಭವಾಗುತ್ತದೆ. ಪರಿಪೂರ್ಣವಾದ ಶಿಕ್ಷಣ ಎಂದರೆ ಪಠ್ಯ, ಪಠ್ಯಪೂರಕ, ಪಠ್ಯೇತರ ಚಟುವಟಿಕೆಗಳನ್ನು ಸರಿಯಾಗಿ ಅಳವಡಿಸಿಕೊಂಡಾಗ ಮಾತ್ರ ಅದು ಪರಿಪೂರ್ಣವಾಗುತ್ತದೆ. ಮಗುವಿನ ಸಹಜ ಪ್ರವೃತ್ತಿ ಆಟ ಆಡುತ್ತಾ ಕಲಿಯುವುದು ಆದ್ದರಿಂದ ವಿದ್ಯಾರ್ಥಿಗಳಿಂದ ಅಂಕಗಳ ನಿರೀಕ್ಷೆ ಮಾಡಬಾರದು ಅದರ ಬದಲಾಗಿ ಅವರ ಜ್ಞಾನದ ಸಂಪಾದನೆ ಆಗಬೇಕು. ಇಂದು ನಡೆದ ಈ ಕಾರ್ಯಕ್ರಮ ‘ಇದು ಕೇವಲ ಪ್ರದರ್ಶನವಲ್ಲ ಪ್ರತಿಭೆಯ ನಿದರ್ಶನ’ ಎಂದು ಹೇಳಿದರು. ೯ನೇ ಶತಮಾನದ ಮಹಾವೀರಾಚಾರ್ಯ ಎಂಬ ಗಣಿತಜ್ಞ ‘ಗಣಿತಸಾರ ಸಂಗ್ರಹ’ ಎಂಬ ಪುಸ್ತಕ ಮೊಟ್ಟಮೊದಲ ಗಣಿತ ಪುಸ್ತಕವಾಗಿದೆ. ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ರೀತಿಯ ಶಕ್ತಿ ಇದೇ ಇರುತ್ತದೆ ಆ ಶಕ್ತಿಯನ್ನು ಅರಿತು ಹೊರತೆಗೆಯಬೇಕು. ಗಣಿತದಲ್ಲಿ ಸಣ್ಣ-ಸಣ್ಣ ಪ್ರಯೋಗಗಳನ್ನು ಮಾಡಿ ಇದರಿಂದ ಗಣಿತದ ಅದ್ಭುತ ಲೋಕವನ್ನು ತಿಳಿಯಲು ಸಹಾಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮುಂದುವರೆದು ಮಾತನಾಡುತ್ತಾ ಚಿಕ್ಕಟ್ಟಿ ಶಾಲೆ ಎಂದರೇ, ಇದೊಂದು ಪ್ರಯೋಗ ಶಾಲೆ. ಇಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಇಲ್ಲಿಯ ಮಕ್ಕಳಿಗೆ ಹೊಸ ಜ್ಞಾನವನ್ನು ತುಂಬುವ ಕೆಲಸ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಅನೇಕ ಹೊಸ ವಿಚಾರಗಳನ್ನು ಅನುಷ್ಟಾನಗೊಳಿಸುವಲ್ಲಿ ಈ ಚಿಕ್ಕಟ್ಟಿ ಶಾಲೆಯೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಈ ಸಾಧನೆಗೆ ಮುಖ್ಯ ಕಾರಣ ಚಿಕ್ಕಟ್ಟಿ ಗುರುಗಳಲ್ಲಿ ಇರುವ ಆಸಕ್ತಿ, ಶಿಸ್ತು ಮತ್ತು ಕೆಲಸದಲ್ಲಿರುವ ಅವರ ಶ್ರದ್ಧೆಯಾಗಿದೆ ಎಂದು ಹೇಳಿದರು.

ಪೂರ್ಣಾನಂದ ಮಠದ ಪರಮ ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಜಿ ಲೋಕಾಪೂರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಈ ಶಾಲೆಗೆ ಆಗಮಿಸಿದರೆ ಸ್ವರ್ಗಲೋಕಕ್ಕೆ ಬಂದ ಹಾಗೇ ಭಾಸವಾಗುತ್ತದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಬಹಳ ಪುಣ್ಯ ಮಾಡಿದ್ದೀರಿ ಏಕೆಂದರೆ ಎಲ್ಲರಿಗೂ ಆರ್ದಶವಾಗಿರುವ ಈ ಶಾಲೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಸಮಾಜದಲ್ಲಿ ಒಂದು ಉನ್ನತವಾದ ಸ್ಥಾನಕ್ಕೆ ಏರಬೇಕು. ನಿಮ್ಮೆಲ್ಲರಿಗೂ ಸರಸ್ವತಿಯ ಕೃಪೆ ಸಿಗಲಿ ಎಂದು ಆಶೀರ್ವಾದ ಗೈದರು. ದೇಶದ ಹಾಗೂ ತಂದೆ-ತಾಯಿಯರ ಆಸ್ತಿ ಎಂದರೆ ಈ ಮಕ್ಕಳು. ಇವರೇ ನಮಗೆ ಐಶ್ವರ್ಯ. ನಿಮ್ಮಗೆಲ್ಲರಿಗೂ ಉತ್ತಮವಾದ ಶಿಕ್ಷಣ ಕೊಡಿಸುವಲ್ಲಿ ತಂದೆ-ತಾಯಿಯರ ಶ್ರಮವಿರುತ್ತದೆ. ಅದಕ್ಕೋಸ್ಕರ ನೀವು ಶ್ರಮಪಟ್ಟು ಓದಿ, ಛಲದಿಂದ ಓದಿ ಶಿಕ್ಷಣದ ಎಲ್ಲ ರಂಗಗಳಲ್ಲೂ ಮುಂದೆ ಬರುವ ಶಕ್ತಿ ನಿಮ್ಮಲ್ಲಿದೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಈ ಶಾಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಕಣ್ಣಿಗೆ ಕಾಣುವ ಪ್ರತಿಯೊಂದು ನಾಮಫಲಕದ ಅಕ್ಷರಗಳಿಂದ ಜ್ಞಾನದ ಸಂಪಾದನೆ ಆಗುತ್ತದೆ. ಆಲಸ್ಯ, ದರಿದ್ರ, ನಿದ್ದೆ ಎಲ್ಲವನ್ನು ಸ್ವಲ್ಪ ಸಮಯದವರೆಗೆ ಬದಿಗೊತ್ತಿ ವಿದ್ಯೆ ಕಲಿಯುವ ಕಡೆಗೆ ನಿಮ್ಮ ಗಮನವನ್ನು ಹರಿಸಬೇಕೆಂದು ವಿದ್ಯಾಥಿಗಳಿಗೆ ಕಿವಿಮಾತು ಹೇಳಿದರು.
ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ.ಎಸ್.ವಾಯ್ ಚಿಕ್ಕಟ್ಟಿ ಗುರುಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು, ವಿನಯ್ ಚಿಕ್ಕಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವಿನಯ್.ಎಸ್. ಚಿಕ್ಕಟ್ಟಿಯವರು ಸ್ವಾಗತಿಸಿದರು. ಬಿಪಿನ್ ಚಿಕ್ಕಟ್ಟಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಶುಂಪಾಲರಾದ ಪ್ರೊ. ಬಿಪಿನ್.ಎಸ್. ಚಿಕ್ಕಟ್ಟಿಯವರು, ವಿನಯ ಚಿಕ್ಕಟ್ಟಿ ಐ.ಸಿ.ಎಸ್.ಇ ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ಶೋಭಾ ಸ್ಥಾವರಮಠ ಅವರು, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಪಮುಖ್ಯೋಪಾಧ್ಯಾಯರಾದ ಶ್ರೀಮತಿ ರೀಯಾನಾ ಮುಲ್ಲಾ ಅವರು, ಸಂಸ್ಥೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಿಕ್ಕಟ್ಟಿ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅವನಿ ಕುಲಕರ್ಣಿ ಹಾಗೂ ಕುಮಾರಿ ಅಸ್ಪೀಯಾ ಮುಲ್ಲಾ ಕಾರ್ಯಕ್ರಮದ ನಿರೂಪಣೆ ಗೈದರು, ಕುಮಾರ ಸಮರ್ಥ ಮುತಗಿ ಈ ಕಾರ್ಯಕ್ರಮದ ವಂದನಾರ್ಪಣೆ ಗೈದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net