ತಾಯಿ-ಮಗುವಿಗೆ ಶುದ್ಧ ಗಾಳಿ ಬೇಡವೇ?: ರಕ್ಷಣಾ ಆಯೋಗ
ವಿಜಯವಾಣಿ ಸುದ್ದಿಜಾಲ ಗದಗ
ಎಚ್ .ಕೆ. ಪಾಟೀಲರು ಗದಗ ಜಿಲ್ಲೆಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಆದರೆ ಅವುಗಳನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಏನು ಪ್ರಯೋಜನ. ಬಾಣಂತಿ- ನವಜಾತ ಶಿಶುವಿಗೆ ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ ಬೇಡವೇ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗುರುವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವಿಭಾಗದ ತೀವ್ರ ನಿಗಾ ಘಟಕ, ಮಹಿಳೆಯರು ಮತ್ತು ಮಕ್ಕಳ ವಾರ್ಡ್ ಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಬಾಣಂತಿ ಮತ್ತು ಮಕ್ಕಳ ವಾರ್ಡ್ ಗಳಿಗೆ ಶುದ್ಧ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಎಸಿ ಅಳವಡಿಸಿದ್ದರೂ ಅವು ಸುಸ್ಥಿತಿಯಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.
ನಂತರ ಪ್ರತಿಯೊಂದು ವಾರ್ಡ್ ಗೂ ಭೇಟಿ ನೀಡಿದ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮತ್ತು ಸದಸ್ಯರಾದ ಶೇಖರಗೌಡ ರಾಮತ್ನಾಳ, ಡಾ. ತಿಪ್ಪೇಸ್ವಾಮಿ ಕೆ.ಟಿ., ಮಹಿಳೆ ಮತ್ತು ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಒಳರೋಗಿಗಳನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದರು. ಮಕ್ಕಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ದುರಸ್ತಿಯಲ್ಲಿರುವ ಐಸಿಯು ಘಟಕಗಳನ್ನು ಶೀಘ್ರವೇ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಕಳಪೆ ತೊಗರಿಬೇಳೆ:
ಗದಗ ತಾಲೂಕಿನ ನಾಗಾವಿ ಗ್ರಾಮದ ಪ್ರೌಢಶಾಲೆಗೆ ಭೇಟಿ ನೀಡಿದ ಆಯೋಗ, ಬಿಸಿಯೂಟಕ್ಕೆ ತೊಗರಿಬೇಳೆ ಕೊರತೆ ಮತ್ತು ಕಳಪೆ ಬೇಳೆ ಕಂಡು ಅಸಮಾಧಾನ ವ್ಯಕ್ತಪಡಿಸಿತು.
ಮುಳಗುಂದ ಪೊಲೀಸ್ ಠಾಣೆಗೆ ಭೇಟಿದ ಆಯೋಗ,ಮಕ್ಕಳ ವಿಶೇಷ ಪೊಲೀಸ್ ಘಟಕ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿತು. ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ರೆಜಿಸ್ಟರ್ ನಿರ್ವಹಿಸಬೇಕು. ಮಕ್ಕಳ ಪೊಲೀಸ್ ಕಲ್ಯಾಣ ಅಧಿಕಾರಿ ಸಹಿ ಮಾಡಿರಬೇಕು ಎಂದು ಸೂಚನೆ ನೀಡಿತು. ಆನಂತರ ಅಸುಂಡಿ ಗ್ರಾಮ ಪಂಚಾಯಿತಿಗೆ ಭೇಟಿ ಮಾಹಿತಿ ಸಂಗ್ರಹಿಸಿತು.
ಬಾಕ್ಸ್
ನೋಟಿಸ್ ಜಾರಿ:
ಜಿಮ್ಸ್ ಭೇಟಿಗೂ ಮೊದಲು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿದ ಆಯೋಗ, ತಪ್ಪು ಮಾಹಿತಿ ನೀಡಿದ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು. ಆಯೋಗದ ಸೂಚನೆ ಮೇರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಾಚಾರ್ಯೆ ಮಂಜುಳಾ ಆರಿಕಟ್ಟಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಬಾಕ್ಸ್
ಅಮಾನತಿಗೆ ಸೂಚನೆ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಮಹಾವಿದ್ಯಾಲಯದ ಹಾಸ್ಟೆಲ್ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ ಆಯೋಗ, ತಕ್ಷಣ ವಾರ್ಡನ್ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೋಟೋ
ಗದಗ ಜಿಲ್ಲಾ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.