

ವಿಜಯವಾಣಿ ಸುದ್ದಿಜಾಲ ಗದಗ
ಕೂಡಲಸಂಗಮ ಜಯ ಮೃತ್ಯುಂಜಯ ಶ್ರೀಗಳಿಗೆ ಕೂಡಲಸಂಗಮದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ತಮ್ಮ ನೋವನ್ನು ಶ್ರೀಗಳು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಶಾಸಕ ವಿನಯ ಕುಲಕಣಿರ್, ರಾಜು ಕಾಗೆ ಸಹಿತ ಅನೇಕ ಮುಖಂಡರ ಜೊತೆ ಚಚಿರ್ಸಿ, ಮಲಪ್ರಭಾ ನದಿ ದಡದಲ್ಲಿ ಹೊಸ ಆಶ್ರಯ ಮಾಡಿಕೊಡಬೇಕು ಎನ್ನುವ ಚಿಂತನೆಯಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಮುಖಂಡರ ಸಭೆಯ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಹೊಸ ಮಠ ಕಟ್ಟುವ ಸಂದರ್ಭ ಎದುರಾದರೆ ಸಮಾಜದ ಜನ ತನು-ಮನ-ಧನದಿಂದ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ವಿಷಯದಲ್ಲಿ ಸರ್ಕಾರ ಬದಲಾದ ಮೇಲೆ ಕೆಲವರ ಧ್ವನಿ ಬದಲಾಗಿದೆ ಎಂದು ವಿಜಯಾನಂದ ಕಾಶಪ್ಪನ್ನವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಿ.ಸಿ. ಪಾಟೀಲ, ಸಮಾಜ ಮತ್ತು ರಾಜಕಾರಣದ ಆಯ್ಕೆ ಬಂದಾಗ ನಾನು ಸಮಾಜವನ್ನು ಒಪ್ಪಿಕೊಳ್ಳುತ್ತೆನೆ. ಇದೇ ಮನೋಭಾವ ಸಮಾಜದ ಇತರ ರಾಜಕಾರಣಿಗಳಿಗೂ ಇರಬೇಕು. ಸಮಾಜದ ಪ್ರತಿನಿಧಿಯಾಗಿ ಬಸವಜಯ ಮೃತ್ಯುಂಜಯ ಶ್ರೀಗಳ ಪಾದಯಾತ್ರೆಗೆ ಸಹಕಾರ ನೀಡಿದೆ. ಆದರೆ ಸರ್ಕಾರ ಬದಲಾದ ಮೇಲೆ ಕೆಲವರ ಧ್ವನಿ ಬದಲಾಯಿತು ಎಂದರು.
= = = =
ಮತ್ತೊಮ್ಮೆ ಸಿಎಂ ಬಳಿ ತೆರಳುವುದಿಲ್ಲ: ಕೂಡಲ ಸಂಗಮ ಶ್ರೀಗಳು
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಬಸವ ಜಯ ಮೃತ್ಯುಂಜಯ ಶ್ರೀಗಳು, ಕೂಡಲಸಂಮಗದಲ್ಲಿಯೇ ಪಂಚಮಸಾಲಿ ಪೀಠ ಆಗಬೇಕು ಎಂದು ಎಸ್.ಬಿ. ಸಂಕಣ್ಣವರ ನೇತೃತ್ವದಲ್ಲಿ ನಿರ್ಣಯ ಕೈಗೊಂಡಿದ್ದು ಇದೇ ಗದಗ ನೆಲದಲ್ಲಿ. ಸಿ.ಸಿ. ಪಾಟೀಲ, ಶ್ರೀಶೈಲಪ್ಪ ಬಿದರೂರ, ಕಳಕಪ್ಪ ಬಂಡಿ ಅದಕ್ಕೆ ಸಹಕಾರ ನೀಡಿದರು. ಈಗ ಇದೇ ನೆಲದಲ್ಲಿ ಹೊಸ ಆಶ್ರಯ ಕಲ್ಪಿಸುವ ಚಿಂತನೆ ನಡೆದಿದೆ. ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ನಿರಂತರವಾಗಿದೆ. ಬೆಳಗಾವಿಯಲ್ಲಿ ಲಾಠಿ ಚಾರ್ಜ ಆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮತ್ತೆ ಅವರ ಮುಂದೆ ಅಗಲಾಚುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವ ಪ್ರತಿನಿಧಿಗಳಿಗೆ ಬೆಂಬಲಿಸುವ ಸಂಬಂಧ, ರಾಜ್ಯದ 10 ಜಿಲ್ಲೆಗಳಲ್ಲಿ ಸಮಾಜದ ಮನೆ ಮನೆಗೆ ಹೋಗಿ, ಆಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, 2028ರಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದಿಂದ ನಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದರು.