

Gadag: ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿ, ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಶನಿವಾರ ಮಧ್ಯಾಹ್ನ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಕ್ರಾಸ್ ಬಳಿ ಸಂಭವಿಸಿದೆ.
ಗದಗ ನಗರದಿಂದ ಮುಂಡರಗಿ ಪಟ್ಟಣಕ್ಕೆ ಹೊರಟಿದ್ದ ಬಸ್ ಹಾಗೂ ಕೊಪ್ಪಳದಿಂದ ಗದಗ ನಗರಕ್ಕೆ ಬರುತ್ತಿದ್ದ ಎರಡು ಬಸ್ಗಳ ಈ ಅಪಘಾತ ಸಂಭವಿಸಿದೆ. ಗದಗ ನಿಂದ ಮುಂಡರಗಿಗೆ ತೆರಳುತ್ತಿದ್ದ ಬಸ್ ಚಾಲಕನ ನಿರ್ಲಕ್ಷ$್ಯವೇ ಅಪಘಾತಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಪ್ಪಳದಿಂದ ಗದಗ ನಗರಕ್ಕೆ ವೇಗವಾಗಿ ಬರುತ್ತಿದ್ದ ಬಸ್ ಗಮನಿಸದೇ ಗದಗ ನಿಂದ ಮುಂಡರಗಿಗೆ ತೆರಳುತ್ತಿದ್ದ ಬಸ್ ಚಾಲಕ ರಸ್ತೆ ಕ್ರಾಸ್ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಟನೆಯಲ್ಲಿ 5 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಇನ್ನುಳಿದ 20 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ನಿಂದ ಮುಂಡರಗಿಗೆ ತೆರಳುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯನ್ನು ಕ್ರಾಸ್ ಮಾಡಿ ತೆರಳಬೇಕಾದ ಅನಿವಾರ್ಯತೆ ಇದೆ. ಈ ಸ್ಥಳದಲ್ಲಿ ಈಗಾಗಲೇ ಹಲವಾರು ಬಾರಿ ಗಂಭೀರ ಸ್ವರೂಪದ ಅಪಘಾತಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.