

ವಿಜಯವಾಣಿ ಸುದ್ದಿಜಾಲ ಗದಗ
ಸ್ಥಳಿಯ ಸಂಸ್ಥೆಯಲ್ಲಿ ನಿವೇಶನ ಹಂಚಿಕೆ ಯೋಜನೆಯಡಿ ಲಂಚಗುಳಿತನದ ಕೆಟ್ಟ ಅಭ್ಯಾಸ ರೂಢೀಸಿಕೊಳ್ಳಲಾಗಿದೆ. ನಿವೇಶನಕ್ಕೆ ಇಂತಿಷ್ಟು ಲಂಚ ಎಂದು ನಿಗದಿಮಾಡಿ ಒಟ್ಟಾರೆ ಯೋಜನೆಯನ್ನೇ ದಾರಿ ತಪ್ಪುವಂತೆ ಅಧಿಕಾರಿಗಳು ಮಾಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೇಶನ ಹಂಚಿಕೆ ಯೋಜನೆಯು ಫಲಾನುಭವಿಗೆ ಲಾಭ ಆಗುವ ಬದಲಾಗಿ ಅಧಿಕಾರಿಗಳಿಗೆ ಲಾಭ ಆಗುತ್ತಿದೆ. 5697 ನಿವೇಶನ ಪೈಕಿ ಕೇವಲ 248 ನಿವೇಶನ ಮಾತ್ರ ಹಂಚಿಕೆ ಆಗಿದೆ. ಇನ್ನೂಳಿದವು ಕೇವಲ ಪ್ರಕ್ರಿಯೆ ಹಂತದಲ್ಲೇ ಉಳಿದಿವೆ ಎಂದರು. ಈ ಮಧ್ಯೆ ಪ್ರವೇಶಿಸಿದ ಶಾಸಕ ಸಿ.ಸಿ. ಪಾಟೀಲ, ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ಸಾಲಿನ ಸಭೆಯ ಅನುಪಾಲನ ವರದಿ ಅನ್ವಯ ಕುಡಿಯುವ ನೀರಿನ ಕುರಿತು ಸಭೆಯಲ್ಲಿ ಚರ್ಚೆ ಜರುಗಿ, ನಿರಂತರ ಕುಡಿಯುವ ನೀರಿನ ಸಮಸ್ಯೆಗೆ ಕಾರಣ ಕಂಡುಕೊಳ್ಳಲಾಯಿತು. ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತರು, ನಗರದಲ್ಲಿ ನೀರು ಪೂರೈಕೆ ಪೈಪ್ ಲೈನ್ಗಳು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಕೆಲವಡೆ ಅಧಿಕ ವ್ಯಾಪ್ತಿಯ ಪೈಪ್ಲೈನ್ ಮತ್ತು ಕೆಲವಡೆ ಕಡಿಮೆ ವ್ಯಾಪ್ತಿಯ ಪೈಪ್ಲೈನ್ ಅಳವಡಿಸಿದ್ದರಿಂದ ನೀರು ಸರಾಗವಾಗಿ ಸಾಗದೇ ಮಧ್ಯದಲ್ಲೇ ಪೈಪ್ಲೈನ್ ಒಡೆದು ನೀರು ಪೋಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಮಾತನಾಡಿ, ನೀರು ಪೂರೈಕೆ ಸಮಸ್ಯೆ ಕುರಿತು ಉನ್ನತಮಟ್ಟದ ಸಮೀಕ್ಷೆ ನಡೆಸಿದ್ದೇವೆ. ಇನ್ನೊಂದು ವಾರದೊಳಗೆ ವರದಿ ಸಲ್ಲಿಕೆ ಆಗಲಿದೆ. ವರದಿ ಆಧರಿಸಿ ನೀರು ಪೂರೈಕೆಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ನಗರ ನೀರು ಸರಬರಾಜು, ಗ್ರಾಮೀಣ ನೀರು ಸರಬರಾಜು, ಸ್ಥಳಿಯ ಸಂಸ್ಥೆಗಳು ಗದಗ ನಗರಕ್ಕೆ ನೀರು ಕೊಡಬಾರದು ಎಂದು ನಿರ್ಧರಿಸಿದ್ದಾರೆ ಎಂದು ಗೊತ್ತಾಗುತ್ತಿದೆ. 1987 ರಿಂದ 2025ರ ವರೆಗೂ ಗದಗ ನೀರಿನ ಸಮಸ್ಯೆ ಕೇಳುತ್ತಿದ್ದೇನೆ. ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಊಳಿದಿದೆ. ಈಗೀನ ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ್ದರು. ಅರ್ಪೂಣ ಕಾಮಗಾರಿ ಉದ್ಘಾಟಿಸಿ ನಗರದ ಜನತೆಗೆ ಮೋಸ ಮಾಡಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ಗೊಬ್ಬರ ಬ್ಲಾಕ್ನಲ್ಲಿ ಮಕಾರುತ್ತೀರಿ?
ಗೊಬ್ಬರವನ್ನು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಿ, ಕೃತಕವಾಗಿ ಗೊಬ್ಬರ ಕೊರತೆ ಉದ್ಭವಿಸುವಂತೆ ಮಾಡಿ, ಮತ್ತೇ ಗೊಬ್ಬರ ಕೊರತೆ ಇದೆ ಎಂದು ಇಲ್ಲಿ ಪ್ರಸ್ತಾಪಿಸಿದರೆ ಹೇಗೆ? ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗೊಬ್ಬರ ಕೊರತೆ ಇದೆ. ಸಂಸದರಿಗೆ ಗೊಬ್ಬರ ತರಿಸಿಕೊಡುವಂತೆ ಕೇಳಿ ಎಂದು ಕೃಷಿ ಇಲಾಖೆ ಕಮಿಷನರ್ ತಿಳಿಸಿದ್ದಾರೆ ಎಂದು ಗದಗ ಕೃಷಿ ಇಲಾಖೆ ಅಧಿಕಾರಿ ಅವರು ಬೊಮ್ಮಾಯಿ ಅವರಿಗೆ ಮನವಿ ಮಾಡಿದರು. ಇದರಿಂದ ಸಿಟ್ಟಾದ ಬೊಮ್ಮಾಯಿ, ಕೃಷಿ ಇಲಾಖೆ ಆಯುಕ್ತರು ಮಂತ್ರಿಗಳಿಗೆ ಈ ವಿಷಯ ತಿಳಿಸಬೇಕು. ರಾಜ್ಯದ ಕೃಷಿ ಮಂತ್ರಿಗಳು ಕೇಂದ್ರದ ಕೃಷಿ ಇಲಾಖೆ ಮಂತ್ರಿಗಳಿಗೆ ಗೊಬ್ಬರ ಕೊರತೆ ಮತ್ತು ಬೇಡಿಕೆ ಬಗ್ಗೆ ತಿಳಿಸಬೇಕು. ಅಥವಾ ನನಗೂ ತಿಳಿಸಿದರೂ ನಾನು ಗೊಬ್ಬರ ತರಿಸಿಕೊಡುತ್ತೇನೆ. ಅದನ್ನು ಬಿಟ್ಟು ನಿಮ್ಮ ಸಂಸದರನ್ನೇ ಕೇಳಿ ಎಂದು ಆಯುಕ್ತರು ಹೇಳುತ್ತಾರೆಂದರೆ ರಾಜ್ಯ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ತಿಳಿಯುತ್ತದೆ. ಗೊಬ್ಬರವನ್ನು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಧಿಕಾರಿಗಳೇ ಕುಮ್ಮಕ್ಕೂ ಕೊಡುತ್ತಾರೆ. ಬ್ಲಾಕ್ ಮಾರುಕಟ್ಟೆಯಲ್ಲಿ ಹೆಚ್ವಿನ ಬೆಲೆಗೆ ಗೊಬ್ಬರ ಮಾರಾಟ ಆಗುತ್ತಿದೆ. ಇದನ್ನು ತಡೆಯುವ ಬದಲಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ನಮ್ಮ ರೈತರಿಗೆ ಹೇಗೆ ಗೊಬ್ಬರ ತರಿಸಿಕೊಡಬೇಕು ಎಂದು ನನಗೆ ಗೊತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ರೂಢಿ ಮಾಡಿಕೊಳ್ಳಬೇಕು:
ಸ್ಥಳಿಯ ಸಂಸ್ಥೆಗಳಲ್ಲಿ ಕ್ಲಾಸ್3, ಕ್ಲಾಸ್ 4 ಸಿಬ್ಬಂದಿಗಳಿಗೆ ಮತ್ತು ಹೊರಗುತ್ತಿದೆ ನೌಕರರಿಗೆ ಸರ್ಕಾರದಿಂದ ಸಂಬಳವೇ ಬರುತ್ತಿಲ್ಲ. ಸ್ಥಳಿಯ ಸಂಸ್ಥೆಯ ಸಾಮಾನ್ಯನಿಧಿಯಿಂದ ಅವರ ಸಂಬಳ ಪಾವತಿ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಆಥಿರ್ಕ ಸಂಪನ್ಮೂಲ ಕೊರತೆ ಕಾರಣದಿಂದ ಸಾಮಾನ್ಯ ನಿಧಿಯಿಂದ ವೇತನ ಪಾವತಿ ಆಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಬಳ ಬರದಿದ್ದರೂ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು. ನರೇಗಾ ಸಿಬ್ಬಂದಿಗಳ ಕಳೆದ 5 ತಿಂಗಳ ಸಂಬಳ ಬಾರದೆ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಸಿಇಒ ಭರತ್ ಅವರನ್ನು ಪ್ರಶ್ನಿಸಿದರು. ನಾಲ್ಕೆದು ದಿನಗಳ ಒಳಗಾಗಿ ವೇತನ ಪಾವತಿ ಆಗುತ್ತದೆ ಎಂದು ಭರತ್ ಅವರು ತಿಳಿಸಿದರು. ವೇತನ ಇಲ್ಲದೇ ನಾಲ್ಕೆದು ತಿಂಗಳು ಬದುಕುವುದು ಹೇಗೆ ಎಂದು ಸಂಕನೂರು ಮರು ಪ್ರಶ್ನಿಸಿದರು. ಈ ವೇಳೆ ಬೊಮ್ಮಾಯಿ ಮಧ್ಯಪ್ರವೇಶಿಸಿ, ಈ ಸರ್ಕಾರದಲ್ಲಿ ವೇತನ ಬಾರದಿದ್ದರೂ ಬದುಕುವುದು ಹೇಗೆ ಎಂಬುದನ್ನು ರೂಢಿ ಮಾಡಿಕೊಳ್ಳಬೇಕು. ಈಗ ಗುತ್ತಿಗೆ, ಹೊರ ಗುತ್ತಿಗೆ ನೌಕರರು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಸರ್ಕಾರಿ ನೌಕರರಿಗೂ ರೂಢಿ ಮಾಡಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದರು.
ಎಸ್.ವಿ. ಸಂಕನೂರು, ಚಂದ್ರು ಲಮಾಣಿ, ಸಿ.ಎನ್. ಶ್ರೀಧರ, ಭರತ್ ಎಸ್, ಇತರರು ಇದ್ದರು.