ವಿಶ್ವ ಅಧಿಕ ರಕ್ತದೊತ್ತಡ ದಿನದ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮ

17GDG06
Published on

ವಿಜಯವಾಣಿ ಸುದ್ದಿಜಾಲ ಗದಗ

ವಿಶ್ವ ಅಧಿಕ ರಕ್ತದೊತ್ತಡ ದಿನದ ಅಂಗವಾಗಿ ಗದಗ ಜಿಲ್ಲಾಡಳಿತ ವತಿಯಿಂದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ವಿದ್ಯಾಥಿರ್ಗಳಿಗೆ ಅಧಿಕ ರಕ್ತದೊತ್ತಡ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೀತ ಕೋನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವ ಕ್ಯಾನ್ಸರ್​ ದಿನಾಚರಣೆಯನ್ನು ಪ್ರತಿ ವರ್ಷ ಮೇ17 ರಂದು ಆಚರಿಸಲಾಗುತ್ತದೆ. ಈ ವರ್ಷದ "ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ, ನಿಯಂತ್ರಿಸಿ ಹೆಚ್ಚುಕಾಲ ಬದುಕಿ' ಎಂಬ ಘೋಷವಾಖ್ಯದಂತೆ ಅಧಿಕ ರಕ್ತದೊತ್ತಡ ಖಾಯಿಲೆಯ ಹಾಗೂ ದೇಹದ ಅಂಗಾಗಳ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಅರಿವು ಹೊಂದಬೇಕು. ಈಗಿನ ಆಧುನಿಕ ಜೀವನ ಶೈಲಿಯಿಂದಾಗಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, 100 ಜನರಲ್ಲಿ 25 ಜನರಿಗೆ ಅಧಿಕ ರಕ್ತದೊತ್ತಡ ಕಂಡು ಬರುತ್ತಿದೆ ಎಂದು ತಿಳಿಸಿದರು.

ಮಧ್ಯಪಾನ, ತಂಬಾಕು ಸೇವನೆ, ಅಹಿತಕರ ಆಹಾರ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆ, ಅತೀಯಾದ ದೇಹದ ತೂಕ, ಮಾನಸಿಕ ಒತ್ತಡ ಇವೆಲ್ಲದರ ಕಾರಣದಿಂದ ಅಧಿಕ ರಕ್ತದೊತ್ತಡದ ಪ್ರಕರಣಗಳು ಹೆಚ್ಚಾಗುತ್ತಿವೆ. ಆರಂಭಿಕ ಹಂತದಲ್ಲಿ ಅಧಿಕ ರಕ್ತದೊತ್ತಡವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಹೃದಯ ಸಂಬಂಧಿ ಖಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡದ ಖಾಯಿಲೆ ಇತ್ಯಾದಿ ದೀರ್ಕಾಲದ ರೋಗಗಳಿಂದ ಬಳಲಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಲ್ಲಿ 30 ವರ್ಷ ಮೇಲ್ಪಟ್ಟವರಿಗೆ ವರ್ಷದಲ್ಲಿ ಕನಿಷ್ಟ ಒಂದು ಬಾರಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಪರೀೆ ಮಾಡಲಾಗುತ್ತದೆ. ಆರಂಭಿಕ ಹಂತದಲ್ಲಿ ರೋಗಗಳನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ ಹಳ್ಳಿಗಳಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಕೈಗೊಳ್ಳುತ್ತ ನಮ್ಮ ಇಲಾಖೆಯ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಣಾಧಿಕಾರಿಗಳು ರಕ್ತದೊತ್ತಡ, ಮಧುಮೇಹ ಹಾಗೂ 3 ಸಾಮಾನ್ಯ ಕ್ಯಾನ್ಸರ್​ಗಳ (ಬಾಯಿ, ಸ್ತನ ಹಾಗೂ ಗರ್ಭಕಂಠ) ತಪಾಸಣೆಯನ್ನು ಕೈಗೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ. ರವಿ ಕಡಗಾವಿ ಮಾತನಾಡಿ, ವರ್ಷದಲ್ಲಿ ಕನಿಷ್ಠ 1 ಬಾರಿ ಅಧಿಕ ರಕ್ತದೊತ್ತಡ ಪರೀೆಯನ್ನು ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯು ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್​ಸಿಡಿ ಕ್ಲಿನಿಕ್​ಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತಿದೆ. ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಉಪನ್ಯಾಸಕ ಶಶಿಕಾಂತ ಕಳಕಣ್ಣವರ ಮಾತನಾಡಿ, ಅಧಿಕ ರಕ್ತದೊತ್ತಡ ಖಾಯಿಲೆ ಕುರಿತು ಇಂತಹ ಅಭೂತಪೂರ್ವ ಮಾಹಿತಿ ಹೊಂದಿದ ಕಾರ್ಯಕ್ರಮಗಳು ಎಲ್ಲ ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾಥಿರ್ಗಳ ಮೂಲಕ ಮನೆ ಹಾಗೂ ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುತ್ತದೆ ಎಂದರು ತಿಳಿಸಿದರು.

ಉಪನ್ಯಾಸಕಿ ಭುವನೇಶ್ವರಿ ಪಾಟೀಲ ಮಾತನಾಡಿ, ಉತ್ತಮ ಜೀವನಶೈಲಿ, ದುಷ್ಚಟಗಳಿಂದ ದೂರವಿದ್ದು, ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಿ ಅಧಿಕ ರಕ್ತದೊತ್ತಡದಂತಹ ಅಸಾಂಕ್ರಾಮಿಕ ಖಾಯಿಲೆಯಿಂದ ದೂರವಿರಬಹುದು ಎಂದರು.

ಮುತ್ತುನಗೌಡ ರಬ್ಬನಗೌಡ್ರ, ಡಾ. ಪ್ರವಿಣ ನಿಡಗುಂದಿ, ಜಸ್ವಿನ್​ ತೇಗೂರ, ರಮೇಶ ಅರಹುಣಸಿ, ವಿಠಲ ನಾಯಕ, ವಿರೇಶ ಮದಕಟ್ಟಿ, ಯಾಜ್​ ಮಕಾನದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net