ಬರ ಪರಿಹಾರ ನೀಡುವಂತೆ ಆಗ್ರಹ

06GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಅತಿವೃಷ್ಟಿ-ಅನಾವೃಷ್ಟಿ ಯಿಂದ ರೈತರಿಗೆ ಕೇವಲ ಶೇ.25 ರಷ್ಟು ಮಾತ್ರ ಪರಿಹಾರ ದೊರಕಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ರೈತರಿಗೆ ಬರ ಪರಿಹಾರ ನೀಡುತ್ತಾರೆ ಅಂತಾ ಬಹಳ ಆಶಾ ಭಾವನೆ ಹೊಂದಿದ್ದೆವು, ಆದರೆ ಸರಕಾರ ರೈತರ ಸಮಸ್ಯೆ ಪರಿಹರಿಸಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ವಿರೋಧ ಪಕ್ಷ ರೈತರ ಪರ ಪ್ರತಿಭಟನೆ ನಡೆಸದೆ ಯಾವುದೋ ಇತರೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ರಾಜ್ಯಾಧ್ಯಕ್ಷ ಚನ್ನಪ್ಪ ಪೂಜಾರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ವಾಮಿನಾಥನ್ ವರದಿಯನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಜಾರಿಗೆ ತರುತ್ತಾರೆ ಎಂದು ನಂಬಿ ನಾವು ಮತ ನೀಡಿದ್ದು,ಆದರೆ ಅದನ್ನ ಜಾರಿಗೆ ತಂದಿಲ್ಲ.ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಿಂದ ಅಧಿಕಾರಕ್ಕೆ ಬಂದಿದ್ದು,ಜನರ ಹಾಗೂ ರೈತರ ಕಲ್ಯಾಣಕ್ಕಾಗಿ ಜನಪ್ರತಿನಿದಿಗಳು ಅಧಿಕಾರ ಮಾಡುತ್ತಿಲ್ಲ ಇದರಿಂದ ಲಕ್ಷಾಂತರ ಕುಟುಂಬಗಳು ಬಿದಿಗೆ ಬಂದಿವೆ.

ಹೆಸರು ಬೆಳೆದ ಜಿಲ್ಲೆಯ ರೈತರಿಗೆ ಜಿಲ್ಲೆಯಲ್ಲಿ ಸರಕಾರ ಹೆಸರು ಖರೀದಿ ಕೇಂದ್ರ ಪ್ರಾರಂಭಿಸಿಲ್ಲ.ರೈತರ ಪಾಲಿಗೆ ಸರಕಾರ ಸತ್ತಿದೆ, ಅಧಿಕಾರಕ್ಕೆ ಬರಲು ಮಾತ್ರ ರೈತರಿಂದ ಮತ ಪಡೆದು ರೈತರ ಸಮಸ್ಯೆಗಳ  ಬಗ್ಗೆ ಕಾಳಜಿ ತೋರದ ಜನಪ್ರತಿನಿದಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ರಾಜ್ಯಾದ್ಯಂತ  ಎಲ್ಲ ಜಿಲ್ಲೆಗಳಲ್ಲಿ ಜನಪ್ರತಿನಿದಿಗಳ ನಿವಾಸದ ಮುಂದೆ ಧರಣಿ ಮಾಡಲಾಗುವುದಾಗಿ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ರಾತ್ರಿ ಸಮಯ ನಿರಂತರ ವಿದ್ಯುತ್ ಒದಗಿಸಬೇಕು. ರೈತರಿಗೆ ಅಕ್ರಮ- ಸಕ್ರಮ ರೀತಿಯಲ್ಲಿ ವಿದ್ಯುತ್ ಜಾರಿಗೆ ತರಬೇಕು. ವಿದ್ಯುತ್ ಮೀಟರ್ ನೊಂದಿಗೆ ಆಧಾರ್ ಜೋಡಣೆ ಕಾರ್ಯವನ್ನ ಯಾವ ಕಾರಣಕ್ಕೆ ಅಂತಾ ರಾಜ್ಯ ಸರಕಾರ ಸ್ಪಷ್ಟ ಪಡಿಸಬೇಕು. ವಿರೋಧ ಪಕ್ಷದ ನಾಯಕರು ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲದಂತಾಗಿದೆ ಎಂದು ಚನ್ನಪ್ಪ ಪೂಜಾರ ಹೇಳಿದರು.

ಪತ್ರಿಕಾ ಗೋಷ್ಠಿ ವೇಳೆ ಕರ್ನಾಟಕ ರಾಜ್ಯ ಹಸಿರು ಸೇನೆ ಉಪಾಧ್ಯಕ್ಷ ಸುರೇಶ ಬರಗಣ್ಣವರ, ರಾಜ್ಯ ಕಾರ್ಯದರ್ಶಿ ಮಹೇಶಗೌಡ ಸುಬೇದಾರ, ಗದಗ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ, ಗದಗ ತಾಲೂಕಾಧ್ಯಕ್ಷ ಬಸವರಾಜ ಬಾಳಿಕಾಯಿ, ಶರಣಪ್ಪ ಮರಳ್ಳಿ, ಕಿಶನ್ ನಂದಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net