

ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ಪಕ್ಷವು ಮತ್ತು ಕೇಂದ್ರ ಸರ್ಕಾರ ಉಗ್ರ ಸಂಟನೆಗಳ ವಿರುದ್ಧ ಸಮರ ಸಾರಿದೆ. ರಾಷ್ಟ್ರೀಯ ತನಿಖಾ ದಳ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದ ಉಗ್ರ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟುತ್ತಿದೆ. ರಾಜ್ಯ ಸರ್ಕಾರದ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಆದರೆ, ಜೈಲಿನಲ್ಲಿ ಇದ್ದುಕೊಂಡೆ ಉಗ್ರರು ಕೃತ್ಯ ಎಸುಗುತ್ತಿದ್ದರೂ ಸಹ ರಾಜ್ಯ ಸರ್ಕಾರ ಕ್ರಮ ವಹಿಸದೇ ಏಕೆ ಮೌನ ವಹಿಸಿದೆ ಎಂದು ಬಿಜೆಪಿ ಮುಖಂಡ ಬಾಸ್ಕರ್ ರಾವ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆದರೆ ಸರ್ಕಾರವೇ ಹೊಣೆ ಆಗುತ್ತದೆ. ಗೃಹ ಸಚಿವರು ಎಲ್ಲದಕ್ಕೂ ಉಡಾೆ ಉತ್ತರ ನೀಡುತ್ತಾರೆ. ಹೊಣೆ ಹೊತ್ತು ಗೃಹ ಸಚಿವ ಜಿ. ಪರಮೇಶ್ವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಆಂತರಿಕ ಭದ್ರತಾ ಸಂಸ್ಥೆಗಳು ಏಕಿಲ್ಲ?
2008 ರಲ್ಲಿ ಮುಂಬೈ ದಾಳಿ ನಡೆದ ನಂತರ ಎಲ್ಲ ರಾಜ್ಯದಲ್ಲಿ ಆಂತರಿಕ ಭದ್ರತೆ ಗಾಗಿ ಸಂಸ್ಥೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಆದೇಶಿಸಿತ್ತು. ಈ ಸಂಸ್ಥೆಗಳು ರಾಜ್ಯಗಳಿಗೆ ಆಂತರಿಕ ಭದ್ರತೆ ನೀಡುವ ಜವಾಬ್ದಾರಿ ಹೊಂದಿವೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಗೃಹ ಇಲಾಖೆ ಈ ವರೆಗೂ ಸಂಸ್ಥೆಗಳನ್ನು ಸ್ಥಾಪಿಸಿಲ್ಲ. ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಸಚಿವ ಸ್ಥಾನ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅವರಿಂದ ಕಾನೂನು ಸುವ್ಯವಸ್ಥೆ ನಿಭಾಯಿಸಲು ಆಗುತ್ತಿಲ್ಲ. ದರ್ಶನ ಪ್ರಕರಣದಲ್ಲೂ ಇದೇ ರೀತಿ ಆಗಿತ್ತು. ಜೈಲು ಅಧಿಕಾರಿಗಳಿಗೆ ಹಣ ಕೊಟ್ಟು ಮೋಜು ಮಸ್ತಿ ಮಾಡಿದ್ದು ಬೆಳಕಿಗೆ ಬಂದಿತ್ತು ಎಂದರು.
ಪರಪ್ಪನ ಅಗ್ರಹಾರ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಾಳಿ ನಡೆಸಿದೆ. ಅಪರಾಧಿ ಉಗ್ರರಿಗೆ ಜೈಲು ಸಿಬ್ಬಂದಿ, ಜೈಲಿನ ಮನೋವೈದ್ಯ ಸಿಮ್ ಕಾರ್ಡ, ಮೊಬೈಲ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕೆಲಸವನ್ನು ರಾಷ್ಟ್ರೀಯ ತನಿಖಾ ದಳ ತನ್ನ ಕೇಂದ್ರದಿಂದಲೇ ಕಾರ್ಯ ನಿರ್ವಹಿಸಿದೆ. ಆದರೆ, ಇಲ್ಲೇ ಇರುವ ರಾಝ್ಯ ಸರ್ಕಾರಕ್ಕೆ ಇಂತಹ ಕೃತ್ಯದ ವಿಷಯಗಳು ಅರಿವಿಗೆ ಬರುತ್ತಿಲ್ಲ ಎಂಬುದು ಅನುಮಾನ ಮೂಡುತ್ತಿದೆ. ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರು ಜೈಲುಗಳ ಮೇಲೆ ಅಲ್ಲಿನ ಸಿಬ್ಬಂದಿ, ಅಪರಾಧಿ, ವಿಚಾರಣಾಧೀನ ಕೈದಿಗಳ ಮೇಲೆ ಏತಕ್ಕೆ ಸಹಾನುಭೂತಿ ತೋರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಲೆಲ್ಲ ಆಂತರಿಕ ಭದ್ರತಾ ಲೋಪ ಆಗುತ್ತಲೆ ಬಂದಿದೆ ಎಂದು ಆರೋಪಿಸಿದರು.
ಜಿ. ಪರಮೇಶ್ವರ ಮೌನ?
ಭಯೋತ್ಪಾದಕರು ನಕಲಿ ಖಾತೆಗಳನ್ನು ಬಳಸಿ ಕೋಟ್ಯಂತರ ರೂ ಹಣವನ್ನು ಪಡೆದು ಉಗ್ರ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಕೃತ್ಯಗಳ ಬಗ್ಗೆ ಜಿ. ಪರಮೇಶ್ವರ ಅವರು ಒಂದು ಸಭೆಯನ್ನು ನಡೆಸದೇ ಇರುವುದು ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರ ತಕೆತಗ್ಗುಸುವ ಕೆಲಸ ಇದಾಗಿದೆ. ಬೆಂಗಳೂರು ಮತ್ತು ನಾಗರಿಕರ ಮೇಲೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಆಂತರಿಕ ಭದ್ರತೆ ನೀಡುವುದು ಸರ್ಕಾರ ತುರ್ತು ಕೆಲಸ ಎಂದರು. ಇಲ್ಲವಾದರೆ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ, ಎಂ.ಎಸ್. ಕರೀಗೌಡರ, ಅನಿಲ ಅಬ್ಬಿಗೇರಿ, ರಮೇಶ ಸಜ್ಜನರ, ಕೋಟಿಗೌಡರ ಇತರರು ಇದ್ದರು.