

ಅಣ್ಣಿಗೇರಿ ಗುರುಗಳ ಸೇವೆ ಅನುಪಮವಾದದ್ದು : ತೋಂಟದ ಶ್ರೀಗಳು
ಗದಗ, ಸೆ. 5 : ಶಿಕ್ಷಣಕ್ಕಾಗಿ, ಬಡವಿದ್ಯಾರ್ಥಿಗಳ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ.ಅಣ್ಣಿಗೇರಿ ಗುರುಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು ಇತಿಹಾಸದ ಪುಟ ಸೇರುವಂತದ್ದು ಎಂದು ಪೂಜ್ಯ ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಗದುಗಿನ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಗದುಗಿನ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ (ರಿ) ಎರ್ಪಡಿಸಿದ್ದ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳ 5ನೇ ಪುಣ್ಯಸ್ಮರಣೆ ಸಮಾರಂಭ ಮತ್ತು ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿದ್ದ ಅಣ್ಣಿಗೇರಿ ಅವರು ಆಧುನಿಕ ದಿನಗಳಲ್ಲಿಯೂ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಕೈತುಂಬ ಸಂಬಳ ಐಷಾರಾಮಿ ಜೀವನ ನಡೆಸಬಹುದಿತ್ತು ಆದರೆ ಸನ್ಯಾಸಿ, ಸಂತನಾಗಿ, ಗಾಂಧಿವಾದಿಯಾಗಿ ಅತ್ಯಂತ ಸರಳ ಸಜ್ಜನಿಕೆಯ ಜೀವನ ನಡೆಸಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು ಎಂದು ಬಣ್ಣಿಸಿದರು.
ಬಿ.ಜಿ.ಅಣ್ಣಿಗೇರಿ ಗುರುಗಳ ಆಶ್ರಮ ಅವರ ತರುವಾಯ ಅವರ ಶಿಷ್ಯರು ನಿತ್ಯ ಉಚಿತ ಪಾಠ ಹೇಳುವ ಮೂಲಕ ಗುರುಪರಂಪರೆ, ಗುರುಕುಲ ಆಶ್ರಮ ಪದ್ದತಿಯನ್ನು ಮುನ್ನಡೆಸಿರುವದು ಹಾಗೂ ಅವರ ಹೆಸರಿನಲ್ಲಿ ಪ್ರತಿಭಾ ಪ್ರತಿಷ್ಠಾನ ಸ್ಥಾಪಿಸಿ ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುತ್ತಿರುವದು ಶ್ಲಾö್ಯಘನೀಯ, ಆಶ್ರಮ ಹಾಗೂ ಪ್ರತಿಷ್ಠಾನವನ್ನು ಪದಾಧಿಕಾರಿಗಳು ಚೆನ್ನಾಗಿ ನಡೆಸಿಕೊಂದು ಬಂದಿರುವದು ಗುರುಗಳಿಗೆ ಸಲ್ಲಿಸುತ್ತಿರುವ ಗೌರವ ಎಂದರು.
ಮುಖ್ಯ ಅತಿಥಿ ಗದಗ ಲೋಕಾಯುಕ್ತ ಡಿಎಸ್ಪಿ ವಿಜಯ ಬಿರಾದಾರ ಮಾತನಾಡಿ ಇಂದು ಶಿಕ್ಷಣ ಮಟ್ಟ ಕುಸಿಯುತ್ತಿದೆ ಇದಕ್ಕೆ ಕಾರಣ ವಿದ್ಯಾರ್ಥಿ, ಪಾಲಕರು, ಶಿಕ್ಷಕರು ಎಲ್ಲರೂ ಜವಾಬ್ದಾರರಾಗಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ತಿದ್ದಿ ತೀಡಿ ಕೊಂಚ ಕಠಿಣ ಕ್ರಮಗಳನ್ನು ಕೈಗೊಂಡರೆ ಪಾಲಕರು ಪ್ರಶ್ನಿಸಿ ಜಗಳಕ್ಕಿಳಿಯುವದು ಸಲ್ಲದು. ವಿದ್ಯಾರ್ಥಿಗಳನ್ನು ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಲು ಶಿಕ್ಷಿಸದಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಪೊಲೀಸರು ಶಿಕ್ಷಿಸಬೇಕಾದೀತು ಎಂದರು.
ಗುಣಮಟ್ಟದ ಶಿಕ್ಷಣ ಇಂದಿನ ಅವಶ್ಯಕತೆಯಿದೆ ಪಾಲಕ, ಶಿಕ್ಷಕ, ವಿದ್ಯಾರ್ಥಿಗಳಲ್ಲಿ ಸಮನ್ವಯತೆ ಬೇಕು ಎಂದ ಬಿರಾದಾರ ಅವರು ಕೆಲವು ಶಿಕ್ಷಕರು ಪ್ರಶಸ್ತಿಗಾಗಿ ಬೆನ್ನು ಹತ್ತಿರುವದು ಸಲ್ಲದು, ಶಿಕ್ಷಕರು ತಮ್ಮ ತಮ್ಮ ಕರ್ತವ್ಯವನ್ನು ದಕ್ಷತೆ, ಪ್ರಾಮಾಣಿಕತೆಯಿಂದ ಮಾಡಿದರೆ ಪ್ರಶಸ್ತಿಗಳೇ ಶಿಕ್ಷಕರನ್ನು ಹುಡುಕಿಕೊಂಡು ಬರುವವು. ಪ್ರಶಸ್ತಿಗಳನ್ನು ವಸೂಲಿ, ಹಣದಿಂದ ಕೊಂಡುಕೊಳ್ಳುವದಲ್ಲ ಇಂತಹ ವಿಷಯಗಳಿಗೆ ಅಣ್ಣಿಗೇರಿ ಅವರು ನಿಷ್ಠುರವಾಗಿದ್ದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಎಸ್.ಬಿ.ಶೆಟ್ಟರ ತ್ಯಾಗಜೀವಿ ಎಂಬ ಪದ ಬಳಕೆಯಾಗಿದ್ದು ಶಿರಸಂಗಿ ಲಿಂಗರಾಜ ನಂತರ ಅದು ಬಿ.ಜಿ.ಅಣ್ಣಿಗೇರಿ ಅವರಿಗೆ ಸಲ್ಲುವಂತದ್ದು ಅಷ್ಟೇ ಅಲ್ಲಿ ಶೋಭಿಸುವಂತದ್ದು. ಅವರು ಬದುಕಿರುವಾಗಲೇ ದಂತಕಥೆ ಆದವರು. ಒಬ್ಬ ಶಿಕ್ಷಕನ ಹೆಸರಿನಲ್ಲಿ ಆಶ್ರಮ, ಪ್ರತಿಷ್ಠಾನ, ಉದ್ಯಾನವನ, ಗದ್ದುಗೆ, ಸ್ಮಾರಕ, ಮೂರ್ತಿ ನಿರ್ಮಾಣಗೊಳ್ಳುತ್ತವೆ ಎನ್ನುವುದಾರೆ ಆ ಶಿಕ್ಷಕ ಸಮಾಜದ ಮೇಲೆ, ವಿದ್ಯಾರ್ಥಿಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರಬೇಕು ಎಂಬುದನ್ನು ತಿಳಿಯಬಹುದು. ನಗರಸಭೆ ಇಡೀ ವಖಾರಗಳ ಸಾಲುಗಳನ್ನೇ ನಿರ್ಧಾಕ್ಷೀಣ್ಯವಾಗಿ ಬುಲ್ಡೋಜರ್ ಹಚ್ಚಿ ತೆರವುಗೊಳಿಸಿದರೆ ಆ ಸಾಲುಗಳಲ್ಲಿದ್ದ ಅಣ್ಣಿಗೇರಿ ಅವರ ಆಶ್ರಮ ಇಂದಿಗೂ ತಲೆಎತ್ತಿ ಹಾಗೇ ನಿಂತಿರುವದು ಅಣ್ಣಿಗೇರಿ ಅವರ ವ್ಯಕ್ತಿತ್ವಕ್ಕೆ, ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.
ನಿವೃತ್ತ ಹಿರಿಯ ಶಿಕ್ಷಕ ಎಂ.ಡಿ.ಕಮತರ ಅವರಿಗೆ ಪ್ರತಿಷ್ಠಾನದಿಂದ ಗುರುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದ ವಾರ್ಷಿಕ ಸರ್ವ ಸಾಧಾರಣ ಸಭೆಯ ವಾರ್ಷಿಕ ವರದಿಯನ್ನು ಶಿವಾನಂದ ಕಟ್ಟಿ ವಾಚಿಸಿದರು ಎಸ್.ಆರ್.ಪಾಟೀಲ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಸಮಾರಂಭದಲ್ಲಿ ಎಸ್.ಜಿ.ಅಣ್ಣಿಗೇರಿ, ಪ್ರಸನ್ನಕುಮಾರ ಗುತ್ತಿ, ಸಂತೋಷ ಹಾದಿ, ಜ್ಯೋತಿ ವಡಗೇರಿ, ಮಂಜುಳಾ ತುಮ್ಮರಮಟ್ಟಿ, ಹುಲಿಗೆಮ್ಮ ಹಂಚಿನಾಳ, ರೇಣುಕಮ್ಮ, ಮೋಹನ ಆಚಾರ್ಯ, ನಾಗರಾಜ, ಯಲ್ಲಪ್ಪ ಕಲ್ಯಾಣಿ, ಆರ್.ವ್ಹಿ.ಅಂಗಡಿ, ಶಿವಾನಂದ ಭಜಂತ್ರಿ, ಬಸಲಿಂಗಮ್ಮ, ಈರಬಸಮ್ಮ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಬಸವರಾಜ ಬಿಂಗಿ ಸ್ವಾಗತಿಸಿದರು ಶ್ರೀಶೈಲ ಚಿಕ್ಕಮಠ ಅವರಿಂದ ಸಂಗೀತ ಜರುಗಿತು. ಕಳಕಪ್ಪ ಕುರ್ತಕೋಟಿ ವಂದಿಸಿದರು.
ವೇದಿಕೆಯ ಮೇಲೆ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಎಸ್.ಆರ್.ಪಾಟೀಲ, ಶಿವಾನಂದ ದಂಡಿನ, ವಿರುಪಾಕ್ಷಪ್ಪ ಮ್ಯಾಗೇರಿ, ರವಿ ದಂಡಿನ, ಚನ್ನಪ್ಪ ಮಲ್ಲಾಡದ, ತೋಂಟೇಶ ವೀರಲಿಂಗಯ್ಯನಮಠ, ವಿರುಪಾಕ್ಷಪ್ಪ ಶಾಂತಗೇರಿ, ಬಸವರಾಜ ಚೆನ್ನಪ್ಪಗೌಡ್ರ, ಬಸಯ್ಯ ಬೆಳ್ಳೇರಿಮಠ, ಸಿದ್ಧಣ್ಣ ಕವಲೂರ, ಗುರುಸಿದ್ಧಪ್ಪ ಪಿರಂಗಿ ಉಪಸ್ಥಿತರಿದ್ದರು.