ಬೆಣ್ಣೆಹಳ್ಳ ಹಾಗೂ  ನದಿಯ ಹರಿವಿನ ಗ್ರಾಮಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

13GDG10
Published on
ಪ್ರವಾಹಕ್ಕೊಳಗಾಗುವ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗೆ ಪ್ರಥಮಾದ್ಯತೆ ವಹಿಸಿ ಗದಗ: ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಹಾಗೂ  ನದಿಯ ಪ್ರವಾಹಕ್ಕೊಳಗಾಗುವ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗೆ ಸ್ಥಳೀಯ ಅಧಿಕಾರಿಗಳು ಪ್ರಥಮಾದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಿಂದ ವಿಡಿಯೋ ಕಾನ್ಫರನ್ಸ್ ಮೂಲಕ ಗುರುವಾರ ಬೆಣ್ಣೆಹಳ್ಳ ಹಾಗೂ  ನದಿಯ ಪ್ರವಾಹದಿಂದ ತೊಂದರೆಗೊಳಗಾಗುವ ಗ್ರಾಮಗಳ ಸುರಕ್ಷತೆ ಕುರಿತಂತೆ ತಾಲೂಕಾ ಆಡಳಿತದೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಪಾರ ಮಳೆಯಿಂದ ಬಿದ್ದ ಮಳೆ ನೀರು ಚರಂಡಿ ಹಾಗೂ ಪ್ರಮುಖ ಕಾಲುವೆಗಳ ಮೂಲಕ ಸರಾಗವಾಗಿ ಮುಂದೆ ಸಾಗುವಂತೆ ಇರುವ ಗಿಡ ಕಂಟೆ, ಪ್ಲಾಸ್ಟಿಕ್ ತೆರವುಗೊಳಿಸಬೇಕು. ಇದರಿಂದ ವಿನಾಕಾರಣ ಮಳೆ ನೀರು ಮನೆಗಳಿಗೆ ನುಗ್ಗುವುದನ್ನು ತಡೆಯಬಹುದಾಗಿದೆ ಎಂದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲರೂ ಕೇಂದ್ರ ಸ್ಥಾನದಲ್ಲಿದ್ದು ಅತೀವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಸಮರ್ಪಕವಾಗಿ ಎದುರಿಸಬೇಕು. ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜನಜಾನುವಾರುಗಳ ಜೀವ ಹಾನಿ ತಡೆಯುವುದರೊಂದಿಗೆ ಆಸ್ತಿ ರಕ್ಷಣೆ ಮಾಡಬೇಕೆಂದು ಹೇಳಿದರು.

ಈ ಹಿಂದೆ ಅಧಿಕ ಪ್ರಮಾಣದ ಪ್ರವಾಹ ಪರಿಸ್ಥಿತಿ ಎದುರಾದಾಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನೇಕ ಅಧಿಕಾರಿಗಳು ಅನುಭವ ಹೊಂದಿದವರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆಗೆ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಸೂಚಿಸಿದರು.

ನವಿಲುತೀರ್ಥ ಡ್ಯಾಂ 37.731 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು. ನವಿಲುತೀರ್ಥ ಡ್ಯಾಮಿನಿಂದ ಅಪಾರ ಪ್ರಮಾಣದ ನೀರು ಬಿಟ್ಟಲ್ಲಿ ಮುಂದಿನ 18 ಗಂಟೆಯೊಳಗಾಗಿ ನೀರು ಜಿಲ್ಲೆಗೆ ಪ್ರವೇಶ ಮಾಡಲಿದ್ದು ಡ್ಯಾಂನಿAದ ನೀರು ಹೊರಬಿಡುವ ಮಾಹಿತಿ ದೊರೆತ ತಕ್ಷಣ ತಾಲೂಕಾ ಆಡಳಿತಗಳು ಪ್ರವಾಹ ಪೀಡಿತಕ್ಕೊಳಗಾಗುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಆಗುವ ಜೀವ ಹಾನಿ ತಪ್ಪಿಸಬೇಕು ಎಂದರು.

ನವಲಗುAದ ಸೇರಿದಂತೆ 5 ತಾಲೂಕುಗಳ ಮಳೆಯಿಂದ ಅಪಾರ ಪ್ರಮಾಣದ ನೀರು ಬೆಣ್ಣೆಹಳ್ಳ ತಲುಪಿ ಅಲ್ಲಿಂದ ಜಿಲ್ಲೆಗೆ ಒಮ್ಮಿಲೇ ನೀರು ಹರಿದು ಬರಲಿದೆ ಇದರಿಂದ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೊಳಗಾಗುವ ಸಂಭವವಿದ್ದು ಈಗಾಗಲೇ ತಾಲೂಕಾ ಆಡಳಿತ ಅಂತಹ ಗ್ರಾಮಗಳನ್ನು ಗುರುತಿಸಿದೆ. ನೀರಿನ ಪ್ರಮಾಣಕ್ಕನುಗುಣವಾಗಿ ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.

ಪ್ರವಾಹ ಪರಿಸ್ಥಿತಿ ತಲೆದೂರಿದಲ್ಲಿ ಅಗ್ನಿಶಾಮಕ ಇಲಾಖೆ ತಂಡ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ತಾಲೂಕಾ ಆಡಳಿತದೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸುವ ಮೂಲಕ ಪ್ರವಾಹ ಪರಿಸ್ಥಿತಿ ನಿರ್ವಹಣೆ ಮಾಡಬೇಕು. ತಗ್ಗುಪ್ರದೇಶಗಳಲ್ಲಿ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಹೇಳಿದರು.

ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಕಾಳಜಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಅಗತ್ಯಮೂಲಭೂತ ಸೌಲಭ್ಯಗಳು ಇರುವಂತೆ ಪರಿಶೀಲಿಸಬೇಕು. ಸಂದರ್ಭಾನುಸಾರ ಸಾರ್ವಜನಿಕರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದಲ್ಲಿ ಆರೋಗ್ಯಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಗಂಗಪ್ಪ ಎಂ ಮಾತನಾಡಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಜನಜಾನುವಾರು ಸ್ಥಳಾಂತರಕ್ಕೆ ಸ್ಥಳ ಗುರುತಿಸಿಟ್ಟುಕೊಳ್ಳಲಾಗಿದೆ. ಮೊದಲು ಪ್ರವಾಹಕ್ಕೀಡಾಗುವ ಗ್ರಾಮಗಳ ಪಟ್ಟಿಯನ್ನು ಮಾಡಿಟ್ಟುಕೊಂಡಿದ್ದು ಸಂದರ್ಭಕ್ಕನುಸಾರವಾಗಿ ಸಮರ್ಪಕವಾಗಿ ಪ್ರವಾಹ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸೇರಿದಂತೆ ತಾಲೂಕಾ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕಾ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net