ಆಝಾದ್ ಬ್ಯಾಂಕ್‌ನ ಗ್ರಾಹಕರ ಸಂಪರ್ಕ ಸಭೆ-ದಿನದರ್ಶಿಕ ಬಿಡುಗಡೆ

1 Calender
Published on

ಆರೋಗ್ಯ ರಕ್ಷಣೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರವೂ ಇದೆ

ಗದಗ: ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಬ್ಯಾಂಕುಗಳು ಪರಿಣಾಮಕಾರಿ ಕಾರ್ಯ ಮಾಡುತ್ತಿವೆ ಎಂದು ತಜ್ಞ ವೈದ್ಯ ಡಾ.ಪ್ರಕಾಶ ಸಂಕನೂರ ಹೇಳಿದರು.

ಅವರು ಶನಿವಾರ ಗದುಗಿನ ದಿ.ಆಝಾದ್ ಕೋ-ಆ ಬ್ಯಾಂಕ್ ಲಿ., ಸಭಾಂಗಣದಲ್ಲಿ ಎರ್ಪಡಿಸಿದ್ದ ಗ್ರಾಹಕರ ಸಂಪರ್ಕ ಸಭೆಯಲ್ಲಿ ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಣ್ಣ ಮತ್ತು ಮಧ್ಯಮ ವರ್ಗದ ಜನತೆಗೆ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು ಬಹಳಷ್ಟು ಉಪಯುಕ್ತವಾಗಿವೆ. ತಕ್ಷಣ ಸಾಲ ಸೌಲಭ್ಯ ಸಿಗುವದು ಜೊತೆಗೆ ಸಹಕಾರ ಸೌಹಾರ್ದತೆ ದ್ವಿಗುಣಗೊಳ್ಳುವದು ಎಂದರು.

ಸರಕಾರ ಜಾರಿಗೊಳಿಸಿದ ಯಶಸ್ವಿನಿ ಸೇರಿದಂತೆ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಬ್ಯಾಂಕುಗಳು ಪರಿಣಾಮಕಾರಿ ಫಲಿತಾಂಶ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದರು.

ಗದಗ ಪರಿಸರದಲ್ಲಿ ಆಝಾದ್ ಬ್ಯಾಂಕ್ ಬಹು ವರ್ಷಗಳಿಂದ ಈ ಭಾಗದ ಜನತೆಗೆ ಉತ್ತಮ ಸೇವೆ ಒದಗಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಒಳ್ಳೆ ಕಾರ್ಯ ಮಾಡುತ್ತಿದೆ ಎಂದು ಹೇಳಿ ಬ್ಯಾಂಕು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ನೀಡಲಿ ಪ್ರಗತಿ ಹೊಂದಲಿ ಎಂದು ಶುಭ ಕೋರಿದರು.

ಅತಿಥಿಯಾಗಿ ಆಗಮಿಸಿದ್ದ ಗದಗ ಐಎಂಎ ಮಾಜಿ ಅಧ್ಯಕ್ಷ ಡಾ.ಪ್ಯಾರ್‌ಅಲಿ ನೂರಾನಿ ಅವರು ಮಾತನಾಡಿ ಇತ್ತಿಚಿನ ವರ್ಷಗಳಲ್ಲಿ ಬ್ಯಾಂಕು ಪ್ರಗತಿಪಥದಲ್ಲಿ ಮುನ್ನಡೆದಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು. ಬ್ಯಾಂಕ್‌ನ ಗ್ರಾಹಕರಾದ ಪ್ರೊ. ಎಂ.ಎಲ್.ಗುಳೇದಗುಡ್ಡ, ಅಬ್ದುಲ್ ಮುಲ್ಲಾ ಬ್ಯಾಂಕ್ ಪ್ರಗತಿಗೆ ಸಲಹೆ ಸೂಚನೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್‌ನ ಚೇರಮನ್ ಸರಫರಾಜಅಹ್ಮದ್ ಎಸ್. ಉಮಚಗಿ ಮಾತನಾಡಿ ಬ್ಯಾಂಕ್ ಕಳೆದ ೬೦ ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಮುನ್ನಡೆ ಸಾಧಿಸಿದೆ ಇದಕ್ಕೆಲ್ಲ ಶೇರುದಾರರು, ಠೇವಣಿದಾರರು ಬ್ಯಾಂಕ್ ಮೇಲಿಟ್ಟಿರುವ ವಿಶ್ವಾಸವನ್ನು ಅಭಿವ್ಯಕ್ತಗೊಳಿಸುವದು ಎಂದರು.

ಸಣ್ಣಪುಟ್ಟ ವ್ಯಾಪಾರಸ್ಥರಿಗೆ, ಮಧ್ಯಮ ವರ್ಗದ ಜನತೆಗೆ ಗೃಹ ಮತ್ತು ಸಣ್ಣ ಕೈಗಾರಿಕಾ ವ್ಯಾಪಾರಸ್ಥರಿಗೆ ಶೀಘ್ರ ಮತ್ತು ಸುಲಭವಾಗಿ ಸಾಲ ಸೌಲಭ್ಯ ನೀಡಲಿದೆ. ಸಾಲವನ್ನು ಪಡೆದವರು ಹಾಗೂ ಸಾಲಕ್ಕೆ ಜಾಮೀನು ಆದವರು ಶೀಘ್ರವಾಗಿ ಸರಿಯಾಗಿ ಮರುಪಾವತಿ ಮಾಡಿ ಬ್ಯಾಂಕ್ ಬೇರೆಯವರಿಗೂ ಸಾಲ ನೀಡಲು ಸಹಕಾರ ನೀಡಬೇಕೆಂದರು.

ವೇದಿಕೆಯ ಮೇಲೆ ಬ್ಯಾಂಕ್‌ನ ನಿರ್ದೆಶಕರು ಉಪಸ್ಥಿತರಿದ್ದರು. ಎಂ.ಎಚ್.ಜಮಾಲಸಾಬನವರ ಕುರಾಣ ಪಠಿಸಿದರು, ವ್ಯವಸ್ಥಾಪಕ ನಿರ್ದೆಶಕ ಎ.ಜಿ.ಯರಗುಡಿ ಸ್ವಾಗತಿಸಿದರು ಪ್ರಾ.ಮಸ್ತಾನಅಲಿ ಶಿರಹಟ್ಟಿ ನಿರೂಪಿಸಿದರು ಕೊನೆಗೆ ಶಾಖಾ ವ್ಯವಸ್ಥಾಪಕ ಆರ್.ಎಂ.ನದಾಫ ವಂದಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಗ್ರಾಹಕರು, ಗಣ್ಯರು ಹಾಗೂ ಬ್ಯಾಂಕ್‌ನ ಸಿಬ್ಬಂದಿ ವರ್ಗದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net