ಸ್ವಾತಂತ್ರ್ಯೊತ್ಸವ ದಿನಾಚರಣೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

IMG-20240812-WA0011
Published on

ಗದಗ: ಜಿಲ್ಲೆಯಲ್ಲಿ ಬರುವ ಅಗಸ್ಟ 15 ರಂದು ಸ್ವಾತಂತ್ರ್ಯೊಂತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಯಾವುದೇ ಲೋಪದೋಷಗಳಿಲ್ಲದಂತೆ ಸಕಲ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸ್ವಾತಂತ್ರ್ಯೊಂತ್ಸವ ದಿನಾಚರಣೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯೊಂತ್ಸವದ ಮುನ್ನಾ ದಿವಸ ಅಗಸ್ಟ 14 ಹಾಗೂ ಸ್ವಾತಂತ್ರ್ಯೊಂತ್ಸವದ ದಿವಸ 15 ರಂದು ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ದೀಪಾಲಂಕಾರದ ವ್ಯವಸ್ಥೆಗೆ ಕ್ರಮ ವಹಿಸಬೇಕು. ಅಗಸ್ಟ 15 ರಂದು ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿಗಳಿಂದ ರಾಷ್ಟ ಧ್ವಜಾರೋಹಣ ಜರುಗುವುದು. ತದನಂತರ ಶಾಲಾ ಮಕ್ಕಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಯಾವುದೇ ಗೊಂದಲಗಳಾಗದಂತೆ ಮುಂಚಿತವಾಗಿಯೇ ಹಾಜರಿರಬೇಕಾಗುತ್ತದೆ. ಸ್ವಾತಂತ್ರ್ಯೊಂತ್ಸವ ದಿನಾಚರಣೆ ಜರುಗುವ ಕಾರ್ಯಕ್ರಮದ ಸ್ಥಳದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಾಷ್ಟ್ರೀಯ ಹಬ್ಬವು ಇದಾಗಿರುವುದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ ಧ್ವಜಾರೋಹಣವು ಅಗಸ್ಟ 15 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಲಿದ್ದು ಧ್ವಜಸ್ತಂಭದ ವ್ಯವಸ್ಥೆ, ಶಿಷ್ಟಾಚಾರದನ್ವಯ ಆಸನದ ವ್ಯವಸ್ಥೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಸನ್ಮಾನದ ವ್ಯವಸ್ಥೆ ಗೆ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸೂಚಿಸಿದರು. ಶಾಲಾ ಕಾಲೇಜು ಮಕ್ಕಳು ಹಾಗೂ ಶಿಕ್ಷಕ ವೃಂದದವರಿಗೆ ಸೂಕ್ತ ಆಸನದ ವ್ಯವಸ್ಥೆಗೆ ಕ್ರಮ ವಹಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವಾಗ ಹಾಗೂ ಕಾರ್ಯಕ್ರಮದ ನಂತರ ಮರಳಿ ಹೋಗುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲಗಳಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಗಸ್ಟ 15 ರಂದು ಸಂಗೀತ ಸಂಜೆ ಕಾರ್ಯಕ್ರಮ : ಅಗಸ್ಟ 15 ರಂದು ಸಂಜೆ ವೇಳೆ ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ಪೊಲೀಸ್ ಇಲಾಖೆಯಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಆಗಮಿಸಿ ಸಂಗೀತ ಸಂಜೆ ಕಾರ್ಯಕ್ರಮ ವೀಕ್ಷಿಸಬೇಕೆಂದು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ತಿಳಿಸಿದರು.
 
ಸಭೆಯಲ್ಲಿ ವೇದಿಕೆ ವ್ಯವಸ್ಥೆ, ಅಲ್ಪೋಪಹಾರದ ವ್ಯವಸ್ಥೆ, ಎನ್.ಸಿ.ಸಿ. ಎನ್.ಎಸ್.ಎಸ್. ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮ, ಮೈಕಿಂಗ್ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.

 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣೀ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಗೋಗೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಸ್.ಬಾರಾಟಕ್ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಕುರ್ತಕೋಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net