

ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ 78 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ನಿಮಿತ್ತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಹೊಂದಿರುವ ಕ್ರಾಂತಿವೀರರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ರವರು ಸ್ವಾತ್ರಂತ್ರ್ಯ ಹೋರಾಟದ ಅಮರ ಸೇನಾನಿಗಳು ಹಾಗೂ ಭಾರತ ಮಾತೆಯ ಸಿಡಿಲ ಮರಿಗಳಾದ ಹಾಗೂ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರಿಗೆ ನಮನ ಸಲ್ಲಿಸಿ, ಭಾರತ ಮಾತೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳ ಕಥೆ ನಮಗೆ ಸದಾ ಸ್ಪೂರ್ತಿ ತುಂಬುತ್ತಿರಲಿ, ಜೀವನವನ್ನೆಲ್ಲ ದೇಶಕ್ಕಾಗಿಯೇ ಮುಡಿಪಾಗಿಟ್ಟ ಇವರ ತ್ಯಾಗ, ಹೋರಾಟ ಮತ್ತು ಆದರ್ಶಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿ. ಡಿ. ಎಸ್ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಆರ್. ಆರ್. ಜಾಲಿಹಾಳ ರವರು "ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ವೀರಾವೇಶದಿಂದ ಹೋರಾಡಿ ದೇಶಕ್ಕಾಗಿ ಪ್ರಾಣವನ್ನೇ ಸಮರ್ಪಿಸಿದ ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಈ ದೇಶದ ಅಪರೂಪದ ವಜ್ರಗಳು" ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು "ತಾಯ್ನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಮಹತ್ತರವಾದ ಗುರಿಯನ್ನು ಸಾಧಿಸಲು ಯಾವುದೇ ತ್ಯಾಗವು ಅಸಮರ್ಪಕವಾಗಿರುತ್ತದೆ" ಎಂಬುದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಸ್ಪೂರ್ತಿದಾಯಕ ದೃಷ್ಟಿಕೋನವಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಅಮರರಾದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖ್ದೇವ್ ಅವರ ಕೆಚ್ಚೆದೆಯ ಧೈರ್ಯ, ಸಾಹಸಗಳನ್ನು ಹಾಗೂ ಭಗತ್ ಸಿಂಗ್ ಅವರ ಪತ್ನಿ ದುರ್ಗಾದೇವಿಯ ಸ್ವಾತಂತ್ರ್ಯಪರ ಹೋರಾಟವನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ವಿಶ್ವ , ಪದ್ಮಾ, ಸೌಮ್ಯಾ, ಸಿಂಧು, ವೀರೇಶ, ಅಕ್ಷತಾ, ಅಫ್ಸಾನಾ, ಮುಜೆಮಿಲ್, ಮಧುಮತಿ, ಶ್ರುತಿ ರವರು ಈ ಕ್ರಾಂತಿಕಾರರ ಕುರಿತು ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ, ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ವಿ. ಪಿ. ಪಾಟೀಲ, ಶ್ರೀ ಎನ್. ಜಿ. ಚನ್ನಪ್ಪಗೌಡ್ರ, ಶ್ರೀ ಬಸವರಾಜ ಕರಬಿಷ್ಠಿ, ಶ್ರೀ ಶಶಿಧರ ಹೊಸಳ್ಳಿ ಮತ್ತು ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಯಾದ ರವಿಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು, ಸಾಹೇರಾಬಾನು ಪ್ರಾರ್ಥನಾಗೀತೆ ಹಾಡಿದರು, ಮರಿದೇವಿ ಸ್ವಾಗತಿಸಿದರು ಮತ್ತು ಪ್ರಿಯಾ ವಂದಿಸಿದರು.