

ಗದಗ: ಶಿಕ್ಷಣ ಪ್ರೇಮಿ, ತ್ಯಾಗ ಜೀವಿ ಬಿ.ಜಿ.ಅಣ್ಣಿಗೇರಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಗದುಗಿನ ಬಿ.ಜಿ.ಅಣ್ಣಿಗೇರಿ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಕೆಲ ಸಮಯ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಪದಾಧಿಕಾರಿಗಳೊಂದಿಗೆ ಔಪಚಾರಿಕವಾಗಿ ಮಾತನಾಡಿದರು.
ಅಣ್ಣಿಗೇರಿ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಚಿಂತನೆ ಮಾಡುವ ಮೂಲಕ ಅವರ ಬದುಕು ಸುಂದರವಾಗಿ ರೂಪುಗೊಳ್ಳಲು ತಮ್ಮಿಂದಾದ ಎಲ್ಲ ರೀತಿಯ ಸಹಾಯ ಮಾಡಿದ ತ್ಯಾಗ ಜೀವಿ. ಸರಕಾರದ ಯಾವುದೇ ಅನುದಾನವನ್ನು ಬಯಸದೆ ತಮ್ಮ ವೈಯುಕ್ತಿಕ ಹಣವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ ಗುರುಕುಲ ಆಶ್ರಮದ ಮಾದರಿಯಲ್ಲಿ ನಡೆಸಿದ್ದು ಇತಿಹಾಸ ಎಂದರು.
ಅವರ ತರುವಾಯ ಆಶ್ರಮದಲ್ಲಿ ಅವರ ಶಿಷ್ಯರು ಮಕ್ಕಳಿಗೆ ಉಚಿತವಾಗಿ ಟ್ಯೂಶನ್ ಹೇಳಿ ತಮ್ಮ ಗುರುವಿಗೆ ನಮನ ಸಲ್ಲಿಸುವ ಹಾಗೂ ಆ ಮೂಲಕ ಆತ್ಮಸಂತೃಪ್ತಿಯನ್ನು ಕಾಣುವ ಕಾಯಕದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿರುವದು ನೀಜಕ್ಕೂ ಶ್ಲಾö್ಯಘನೀಯ ಎಂದರು.
ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯಯೋಜನೆಗಳನ್ನು ತಿಳಿದುಕೊಂಡ ಸಂಸದ ಬೊಮ್ಮಾಯಿ ಅವರು ತಾವೂ ಈ ಕಾರ್ಯಕ್ಕೆ ತಮ್ಮ ತಂದೆಯ ಹೆಸರಿನಲ್ಲಿ ವೈಯುಕ್ತಿಕವಾಗಿ ನೆರವು ನೀಡುವದಾಗಿ ಹೇಳಿದರಲ್ಲದೆ ಅಣ್ಣಿಗೇರಿ ಗುರುಗಳ ಆಶ್ರಮದ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ ಸಹಾಯ ಮಾಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಶಿವಕುಮಾರ ಪಾಟೀಲ, ಶಿವಾನಂದ ಕತ್ತಿ, ಡಾ.ಎಸ್.ಬಿ.ಶೆಟ್ಟರ, ಬಸವರಾಜ ಬಿಂಗಿ, ಸಿದ್ದಣ್ಣ ಕವಲೂರ, ರವಿ ದಂಡಿನ, ತೋಂಟೇಶ ವೀರಲಿಂಗಯ್ಯನಮಠ, ಶಂಕ್ರಪ್ಪ ಅಣ್ಣಿಗೇರಿ, ಡಾ.ಎಸ್.ಡಿ.ಯರಗೇರಿ, ಸುಭಾಶ ಬೆಟದೂರ, ಅನೀಲ ಅಬ್ಬಿಗೇರಿ, ಆಂಜನೇಯ ಕಟಗಿ, ಎಂ.ಬಿ.ಪಾಟೀಲ, ರಫೀಕ್ ಅಬ್ಬಿಗೇರಿ, ಎಂ.ಎಸ್.ಚಿನ್ನೂರ, ಶ್ರೀಮತಿ ಆಶಾ ಶೆಟ್ಟರ ಸೇರಿದಂತೆ ಬಿಜೆಪಿ-ಕಾಂಗ್ರೇಸ್ ಧುರೀಣರಿದ್ದರು.