

ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತಗಳ ಮಹತ್ವ ಸಾರಿದ ಮೆರವಣಿಗೆ
ವಿಜಯವಾಣಿ ಸುದ್ದಿಜಾಲ ಗದಗ
ನಗರದಾದ್ಯಂತ ಭಾವೈಕ್ಯತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಸಮಾನತೆಯ ಸಂದೇಶ ಸಾರಿದ “ಸಮಾನತೆ ರಥಯಾತ್ರೆ” ಭಕ್ತಿಭಾವದಿಂದ ಜರುಗಿತು. ಬುದ್ಧ, ಬಸವೇಶ್ವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್, ಸಂತ ಶಿಶುನಾಳ ಷರೀಫ, ಕನಕದಾಸ, ರೇಣುಕಾಚಾರ್ಯರ ಆದರ್ಶಗಳನ್ನು ಒಳಗೊಂಡ ಈ ರಥಯಾತ್ರೆ ವಿವಿಧ ವಸ್ತುಚಿತ್ರಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿತು.
ಈ ಯಾತ್ರೆಯಲ್ಲಿ ಬುದ್ಧನ ಶಾಂತಿ ಸಂದೇಶ, ಬಸವೇಶ್ವರನ ಕಾರ್ಯಪಥ "ಕಾಯಕವೇ ಕೈಲಾಸ" ಮತ್ತು ಅಂಬೇಡ್ಕರ್‌ರ “ಶಿಕ್ಷಣ, ಸಂಘಟನ ಮತ್ತು ಹೋರಾಟ” ನಿಂದ ಪ್ರೇರಿತವಾಗಿರುವ ಆಲೋಚನೆಗಳನ್ನು ಬಿತ್ತರಿಸಲಾಯಿತು. ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಸಮಾಜದ ವಿವಿಧ ವರ್ಗದವರು ಈ ಯಾತ್ರೆಯಲ್ಲಿ ಭಾಗವಹಿಸಿದ್ದು, ಇದು ಗದಗ ನಗರದಾದ್ಯಂತ ಸಮಾಜದಲ್ಲಿ ಸಮಾನತೆಯ ವಿಷಯವಾಗಿ ಹೊಸ ಚಿಂತನೆಯನ್ನು ಮೂಡಿಸಿತು. ರಥದ ಮೂಲಕ ವಿವಿಧ ಬೀದಿಗಳಲ್ಲಿ ಜಾಗೃತಿ ಸಂದೇಶ ಹರಡಲಾಗಿತ್ತು.
ವಿವಿಧ ವೃತ್ತದಲ್ಲಿ ನಡೆದ ಮೆರವಣಿಗೆ ನಂತರ ಸ್ವಾಮೀ ವಿವೇಕಾನಂದ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ದೇಶದಲ್ಲಿ ಧರ್ಮ ಮಾತ್ರವಲ್ಲ, ಮಾನವೀಯತೆಯ ಹಾದಿಯಲ್ಲಿ ಸಾಗಬೇಕಿದೆ. ಜಾತಿಗಳ ನಡುವಿನ ಅಂತರ ತೆಗೆದು ಹಾಕಬೇಕಾದರೆ ಸಮಾನತೆಯ ಬುತ್ತಿ ದೇಶದಲ್ಲಿ ಹರಡಬೇಕಿದೆ ಎಂದರು.
ಸಮಾನತೆ ಪ್ರತಿಷ್ಠಾನದ ಅಧ್ಯಕ್ಷ ಅನಿಲ ಮೆಣಸಿನಕಾಯಿ ಮಾತನಾಡಿ,
ಸಮಾಜದಲ್ಲಿ ಅಸಮಾನತೆಯ ಬೇರು ಕತ್ತರಿಸಿ, ಸಮಾನ ಅಧಿಕಾರ, ಶಿಕ್ಷಣ ಮತ್ತು ಆರ್ಥಿಕ ಪ್ರಗತಿಗೆ ಪ್ರತಿಯೊಬ್ಬರ ಹಕ್ಕು ಎಂದೆನ್ನುವ ಭಾವನೆಗಳನ್ನು ಬೆಳೆಸುವುದು ಅವಶ್ಯಕತೆ ಇದೆ. ರಾಜಕೀಯೇತರ, ಜಾತ್ಯಾತೀತ ಕಾರ್ಯಕ್ರಮ ಇದಾಗಿದ್ದು ಎಲ್ಲರು ಈ ಯಾತ್ರೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸಮಾನತೆ ರಥಯಾತ್ರೆ ಕೇವಲ ಮೆರವಣಿಗೆ ಅಲ್ಲ, ಅದು ನಿಜವಾದ ಸಮಾಜ ಪರಿವರ್ತನೆಯ ಸಂಕೇತವಾಗಿದೆ. ಬುದ್ಧನ ಶಾಂತಿ, ಬಸವೇಶ್ವರನ ಸಮಾಜಧರ್ಮ ಮತ್ತು ಅಂಬೇಡ್ಕರ್‌ರ ಸಾಂವಿಧಾನಿಕ ದೃಷ್ಟಿಕೋನ ನಮ್ಮೆಲ್ಲರ ಜೀವನದ ಮಾರ್ಗದರ್ಶಿಯಾಗಬೇಕಿದೆ ಎಂದರು
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಎಂ. ಎಂ. ಹಿರೇಮಠ, ಮಂಜಮ್ಮ ಜೋಗತಿ, ರುದ್ರಣ್ಣ ಗುಳಗುಳಿ, ರವಿಕಾಂತ ಅಂಗಡಿ, ರಾಘವೇಂದ್ರ ಯಳವತ್ತಿ ಸೇರಿದಂತೆ ಹಲವರು ಇದ್ದರು.