

ಶಿವಾನಂದ ಹಿರೇಮಠ ಗದಗ
ಪ್ರತಿ ಮೊಟ್ಟೆಗೆ ರಾಜ್ಯ ಸರ್ಕಾರ 6 ರೂ. ದರ ನಿಗದಿ ಮಾಡಿದ್ದನ್ನೇ ಮೊಟ್ಟೆ ಪೂರೈಕೆದಾರರು ಮತ್ತು ಶಾಲಾ ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸರ್ಕಾರದ ದರ ನಿಗದಿ ಕೆಲ ಸಂದರ್ಭ ಪೂರೈಕೆದಾರರಿಗೆ ಅನುಕೂಲ ಆಗುತ್ತಿದೆ. ಮತ್ತೊಮ್ಮೆ ಅನಾನುಕೂಲ ಆಗುತ್ತಿದ್ದು, ಹೆಚ್ಚುವರಿ ಮೊಟ್ಟೆ ದರ ಭರಿಸಲಾಗದೆ ಮೊಟ್ಟೆ ಪೂರೈಕೆದಾರರು ಪೂರೈಕೆ ಪ್ರಕ್ರಿಯೆಯಿಂದ ಹಿಂದೆ ಸಿರಿಯುತ್ತೇವೆ ಎಂದು ಅಕ್ಷರ ದಾಸೋಹ ಅಧಿಕಾರಿಗಳಿಗೆ ತಲೆ ಬಿಸಿ ಮಾಡುತ್ತಿದ್ದಾರೆ.
ಏನಿದು ಸಮಸ್ಯೆ:
ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಮೊಟ್ಟೆ ಪೂರೈಸಲು ಸರ್ಕಾರ ಒಂದು ಮೊಟ್ಟೆಗೆ 6 ರೂ. ಗರಿಷ್ಠ ದರ ನಿಗದಿ ಮಾಡಿದೆ. ಬೇಸಿಗೆ ಮತ್ತು ಶ್ರಾವಣ ಸಂದರ್ಭ ಮೊಟ್ಟೆ ಬೆಲೆ 5 ರಿಂದ 5.50 ರೂ. ಗೆ ಇಳಿಯುತ್ತದೆ. ಚಳಿಗಾಲ ಸಂದರ್ಭದಲ್ಲಿ 6 ರಿಂದ 6.30 ರೂ ವರೆಗೆ ಮೊಟ್ಟೆ ಬೆಲೆ ಏರಿಕೆ ಆಗುತ್ತದೆ. ಸರ್ಕಾರದ ನಿಯಮ ಪ್ರಕಾರ ಬೆಲೆ ಇಳಕೆಯಾದಾಗ ಇಳಿಕೆ ಬೆಲೆಯನ್ನೇ ಪೂರೈಕೆದಾರರಿಗೆ ಪಾವತಿ ಮಾಡಬೇಕು. ಮತ್ತು ಮೊಟ್ಟೆ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಈ ಪಾವತಿಯಲ್ಲಿ ವ್ಯತ್ಯಾಸ ಆಗುತ್ತದೆ. ಸರ್ಕಾರ ನಿಗದಿ ಪಡಿಸಿದ ದರಕ್ಕಿಂತಲೂ ಕಡಿಮೆ ಬೆಲೆ ಪಾವತಿ ಮಾಡಿ, ಇಳಿದ ಹಣವನ್ನು ಬೆಲೆ ಏರಿಕೆ ಆದಾಗ ಸರಿದೂಗಿಸಬೇಕು ಎಂದು ನಿಯಮ ಹೇಳುತ್ತದೆ. ಆದರೆ, ಶಾಲಾ ಖರೀದಿ ಸಮಿತಿ, ಸ್ಥಳಿಯ ಎಸ್ಡಿಎಂಸಿ ಸಮಿತಿ ಹಾಗೂ ಶಾಲಾ ಆಡಳಿತ ಮಂಡಳಿಯು ಸರ್ಕಾರಿ ನಿಯಮ ಪಾಲಿಸುತ್ತಿಲ್ಲ. ಮೊಟ್ಟೆ ಬೆಲೆಯು ಸರ್ಕಾರ ನಿಗದಿ ಪಡಿಸಿದ 6 ರೂ. ದರಕ್ಕಿಂತ ಇಳಿಕೆ ಕಂಡಾಗಲೂ ಶಾಲಾ ಸಮಿತಿಗಳು ಪ್ರತಿ ಮೊಟ್ಟೆಗೆ 6 ರೂ. ಗಳನ್ನೇ ಪಾವತಿಸುತ್ತಿದೆ. ಹಾಗಾಗಿ ಚಳಿಗಾಲದ ಸಂದರ್ಭದಲ್ಲಿ ಮೊಟ್ಟೆ ಬೆಲೆ ಏರಿಕೆ ಕಂಡಾಗ ಶಾಲಾ ಮಂಡಳಿಗಳಲ್ಲಿ ಮೊಟ್ಟೆ ದರ ಪಾವತಿಗೆ ಅನುದಾನ ಕೊರತೆ ಕಾಣುತ್ತಿದೆ. ಪ್ರತಿನಿತ್ಯ ಹತ್ತಾರು ಸಾವಿರ ರೂ ಕೊರತೆ ಉದ್ಭವಿಸುತ್ತಿದೆ. ಇದು ಅಕ್ಷರ ದಾಸೋಹ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ತಲೆ ಬಿಸಿಯಾಗಿ ಪರಿಣಮಿಸಿದೆ.
ಚಳಿಗಾಲ ಸಂದರ್ಭದಲ್ಲಿ ಸಮಸ್ಯೆ:
ಗದಗ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1,27,619 ಮಂದಿ ವಿದ್ಯಾಥಿರ್ಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಪ್ರತಿನಿತ್ಯ ಶೇ 80ರಷ್ಟು ಹಾಜರಾತಿ ಇರುತ್ತದೆ. ಈ ಪೈಕಿ ಶೇ 70ರಷ್ಟು ವಿದ್ಯಾಥಿರ್ಗಳು ಮೊಟ್ಟೆ ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದ ಮಕ್ಕಳು ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ಬಳಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಒಂದು ಮೊಟ್ಟೆಗೆ 6 ರೂ ಅನುದಾನ ಕೊಡುತ್ತದೆ. ಇದರಲ್ಲಿ ವಿಂಗಡಣೆ ಇದ್ದು, ಮೊಟ್ಟೆ ಖರೀದಿಗೆ 5, ಮೊಟ್ಟೆ ಬೇಯಿಸಲು 50 ಪೈಸೆ, ಮೊಟ್ಟೆ ಬಿಡಿಸಲು 30 ಪೈಸೆ ಹಾಗೂ ಸಾಗಾಣೀಕೆ ವೆಚ್ಚ 20 ಪೈಸೆ ಇರುತ್ತದೆ. ಪ್ರಸ್ತುತ ಮೊಟ್ಟೆ ದರ ಹೆಚ್ಚಾಗಿರುವುದರಿಂದ ದರ ಹೆಚ್ಚಿಸುವಂತೆ ಶಿಕ್ಷಕರು ಕೋರಿದ್ದಾರೆ ಎನ್ನಲಾಗಿದೆ. ಶಿಕ್ಷಕರ ಬೇಡಿಕೆ ಮತ್ತು ಸಮಸ್ಯೆಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಬೇಸಿಗೆ ಮತ್ತು ಶ್ರಾವಣದಂತಹ ಸಂದರ್ಭದಲ್ಲಿ ಶಾಲಾ ಸಮಿತಿಗಳಲ್ಲಿ ಉಳಿಕೆ ಅನುದಾನವನ್ನು ಮಳೆಗಾಲ, ಚಳಿಗಾಲ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಕ್ಷರ ದಾಸೋಹ ಇಲಾಖೆ ಮೂಲಗಳು ತಿಳಿಸಿವೆ.
ಬಾಕ್ಸ್:
ಈ ಹಿಂದೆ ಸರ್ಕಾರ ವಾರಕ್ಕೆ ಎರಡು ದಿನ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿತ್ತು. ಅಜೀಂ ಪ್ರೇಂಜೀ ಪ್ರತಿಷ್ಠಾನದವರು ಕೈಜೋಡಿಸಿದ ನಂತರ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಾರಕ್ಕೆ ಆರು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಖರೀದಿ ಸಮಿತಿಯಲ್ಲಿ ಎಸ್ಡಿಎಂಸಿ ಅಧ್ಯಕ್ಷರು, ಪೋಷಕರು ಇರುತ್ತಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯೋಜನೆ ಅನುಷ್ಟಾನಗೊಳಿಸುತ್ತಿರುವುದಾಗಿ ಹಲವು ಶಿಕ್ಷಕರು ತಿಳಿಸಿದ್ದಾರೆ.
ಬಾಕ್ಸ್:
ಮೊಟ್ಟೆ ಸ್ವೀಕರಿಸುವ ಸಂಖ್ಯೆ
* ಗದಗ ಜಿಲ್ಲೆಯಲ್ಲಿ ಪ್ರತಿನಿತ್ಯ 1,01,600 ಮೊಟ್ಟೆ ಸ್ವೀಕರಿಸುವ ಮಕ್ಕಳ ಸರಾಸರಿ ಸಂಖ್ಯೆ
* ಬಾಳೆಹಣ್ಣು ಸೇವಿಸುವ ಮಕ್ಕಳ ಸರಾಸರಿ ಸಂಖ್ಯೆ 14,515
* ಚಿಕ್ಕಿ ತಿನ್ನುವ ಮಕ್ಕಳ ಸರಾಸರಿ ಸಂಖ್ಯೆ 12,038
* ಜಿಲ್ಲೆಯಲ್ಲಿನ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗಿನ ವಿದ್ಯಾಥಿರ್ಗಳ ಸಂಖ್ಯೆ 1,27,619
ಕೋಟ್:
ಮೊಟ್ಟೆ ದರ ಏರಿಳಿತದಿಂದ ಸ್ಥಳಿಯ ಮಟ್ಟದಲ್ಲಿ ಸಮಸ್ಯೆ ಇದೆ. ಕಾಲ ಕಾಲಕ್ಕೆ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಮೊಟ್ಟೆ ವಿತರಣೆ ಮಾತ್ರ ನಿಂತಿಲ್ಲ. ಆಯಾ ಸ್ಥಳಿಯ ಶಾಲಾ ಖರೀದಿ ಸಮಿತಿಯು ಮೊಟ್ಟೆ ಖರೀದಿಸುತ್ತಾರೆ. ಇನ್ನೂಳಿದಂತೆ ಸಮಸ್ಯೆಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಸರಸ್ವತಿ ಕನವಳ್ಳಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ