

ಶಕ್ತಿದೇವಿಯ ಆರಾಧನೆ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕು: ಶಾಂತವೀರ ಶರಣರು
ವಿಜಯವಾಣಿ ಸುದ್ದಿಜಾಲ ಗದಗ
ನವರಾತ್ರಿ ಆಚರಣೆಯು ಶರನ್ನವರಾತ್ರಿ, ದುರ್ಗಾ ಪೂಜೆ ಮತ್ತು ವಿಜಯದಶಮಿಯನ್ನು ಒಳಗೊಂಡಿದೆ. ಒಂಬತ್ತು ದೇವಿಯರ ಪೂಜೆ ಮಾಡಲಾಗುತ್ತದೆ. ಇದನ್ನು ವಿಜಯವನ್ನು ಸಂಕೇತಿಸಲು ಆಚರಿಸಲಾಗುತ್ತದೆ. ಭಾರತೀಯ ಸಂಸತಿ, ಪರಂಪರೆಯನ್ನು ರೂಢಿಸಿಕೊಂಡು ಬಂದಿರುವ ನಾವು ಶ್ರದ್ಧಾ ಭಕ್ತಿಯಿಂದ ದಸರಾ ಹಬ್ಬವನ್ನು ಆಚರಿಸುವ ಜೊತೆಗೆ ಶಕ್ತಿದೇವಿಯ ಆರಾಧನೆ ಮಾಡಿ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದು ಬಳಗಾನೂರ ಚಿಕೇನಕೊಪ್ಪ ಚನ್ನವಿರ ಶರಣರ ಮಠದ ಶಿವಶಾಂತವೀರ ಶರಣರು ಹೇಳಿದರು.
ನಗರದ ಮುಳಗುಂದನಾಕಾ ಬಳಿಯ ಅಡವೀಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಒಂಬತ್ತು ದಿನಗಳ ನವರಾತ್ರಿ ನಂತರ ದಶಮಿಯಂದು ರಾವಣನ ಪ್ರತಿಕೃತಿಯನ್ನು ದಹಿಸುವ ಮೂಲಕ ವಿಜಯವನ್ನು ಸಂಭ್ರಮಿಸಲಾಗುತ್ತದೆ. ರೈತರು ಮತ್ತು ವ್ಯಾಪಾರಿಗಳು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ. ದುರ್ಗಾದೇವಿ ಮಹಿಷಾಸುರ ರಾಸನನ್ನು ಸಂಹರಿಸಿ, ಲೋಕಕ್ಕೆ ಒಳಿತನ್ನು ತಂದ ಕಥೆಯನ್ನು ನವರಾತ್ರಿ ತಿಳಿಸುತ್ತದೆ. ವಿಜಯದಶಮಿಯ ದಿನದಂದು ಶ್ರೀರಾಮನು ರಾವಣನ ಮೇಲೆ ವಿಜಯ ಸಾಧಿಸಿದನು ಎಂದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದಶಿರ್ ಮಹೇಶ್ವರ ಸ್ವಾಮೀಜಿ ನವರಾತ್ರಿ ಆಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ನಡೆಯಿತು. ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ವಿವಿಧ ಭಕ್ತಿಸೇವೆ ವಹಿಸಿದ್ದ ಗಣ್ಯರನ್ನು ಸನ್ಮಾನಿಸಲಾಯಿತು.
ಬಸವರಾಜ ಬಂಗಾರಶಟ್ಟರ, ಬಾಬಾಸಾ ಭಾಂಡಗೆ, ಅಂಬಾಸಾ ಖಟವಟೆ, ಗಾಯತ್ರಿ ಖಟವಟೆ, ಎಸ್.ಪಿ. ಸಂಶಿಮಠ, ಸದಾಶಿವಯ್ಯ ಮದರಿಮಠ, ಶರಣಬಸಪ್ಪ ಗುಡಿಮನಿ ಹಲವರು ಇದ್ದರು.