ಬೇಸಿಗೆ ಬಂದರೆ ಗುಳೆ ಹೋಗುವ ಜನರಿಗೆ ಕೆಲಸ ಕಲ್ಪಿಸಿ ಇದ್ದೂರಲ್ಲೇ ದುಡಿಮೆಗೆ ದಾರಿ ಮಾಡುವ ನರೇಗಾ ಸಮುದಾಯ ಕಾಮಗಾರಿಗಳು ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಈಗಾಗಲೇ ಆರಂಭವಾಗಿವೆ. ಜೊತೆಗೆ ವಿಶೇಷಚೇತನರಿಗೂ ಮುತುವರ್ಜಿಯಿಂದ ಕೆಲಸ ನೀಡಿ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ಬಾಗೇವಾಡಿ ಗ್ರಾಮದ 41 ವರ್ಷದ ಹೊನಕೇರಪ್ಪ ಭಕ್ಷಪ್ಪನವರ ಅವರ ಒಂದು ಕಾಲು ಮೊದಲಿನಿಂದಲೂ ಊನವಾಗಿದ್ದು ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿಕಾರರಿಗೆ ನೀರು ಕೊಡುವುದರ ಜೊತೆಗೆ ಪಡ ಕಡಿಯುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಹಳ್ಳಿಗಳ ಅಭ್ಯುದಯದ ಕನಸು ಹೊಂದಿರುವ ನರೇಗಾ ಯೋಜನೆಯಲ್ಲಿ ಭಾಗವಹಿಸಿ ಗರ್ಭಿಣಿಯರು, ಅಂಗವಿಕಲರು ಹಾಗೂ ವೃದ್ಧರಿಗಾಗಿ ಇರುವ ಅರ್ಧ ಕೆಲಸ ಪೂರ್ಣ ಕೂಲಿ ನಿಯಮವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕಾಲು ಊನ ಇರುವುದರಿಂದ ಇತರೆ ಜನರ ಜಮೀನು ಹಾಗೂ ದಿನಗೂಲಿ ಕೆಲಸಗಳಲ್ಲಿ ಕೆಲಸ ಸಿಗುವುದು ಕಡಿಮೆ. ಆದರೆ ನರೇಗಾ ಯೋಜನೆಯ ಮೂಲಕ ಆ ಕೊರತೆ ನೀಗಿ ಉತ್ತಮ ಕೂಲಿ ಮೊತ್ತವು ಪಾವತಿಯಾಗುತ್ತಿದೆ ಎನ್ನುತ್ತಾರೆ ಅವರು.