ಮತದಾನ ಜಾಗೃತಿ ಮೂಲಕ ವಿಶಿಷ್ಟವಾಗಿ ಪಂಚಾಯತ್ ರಾಜ್ ದಿವಸ ಆಚರಣೆ

sveep photo -2
Published on

ನರಗುಂದ: ತಾಲೂಕು ಪಂಚಾಯತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಸಾರ್ವಜನಿಕರ ಸ್ಥಳಗಳಾದ ಬಸ್ ನಿಲ್ದಾಣ ಹಾಗೂ ಆಟೋ ರೀಕ್ಷಾ ನಿಲ್ದಾಣಗಳಲ್ಲಿನ ಸಾರ್ವಜನಿಕರಿಗೆ ಕಡ್ಡಾಯ ಮತದಾನ ಜಾಗೃತಿ ಮೂಡಿಸಲಾಯಿತು. ಬಸ್ ನಿಲ್ದಾಣದಲ್ಲಿನ ಮತದಾರರನ್ನು ನೇರವಾಗಿ ಭೇಟಿಯಾಗಿ ಕೈಗೆ ರೆಡ್ ರೋಸ್ ನೀಡುವುದರ ಮೂಲಕ ಮೇ-7 ರಂದು ಕಡ್ಡಾಯವಾಗಿ ಮತದಾನ ಮಾಡಿ  ಎಂದು ತಾಲೂಕು ಪಂಚಾಯತ ಅಧಿಕಾರಿಗಳು ಮನವಿ ಮಾಡಿದರು. ಕೈ ಗೆ ರೆಡ್ ರೋಸ್ ನೀಡಿ ಮತದಾನ ಜಾಗೃತಿ ಮೂಡಿಸುತ್ತಿದ್ದ ಅಧಿಕಾರಿಗಳ ನಡೆ ಕಂಡು ಮತದಾರರು ಪುಳುಕಿತರಾದರು.

ಪಂಚಾಯತ್ ರಾಜ್ ದಿವಸದ ಪ್ರಯುಕ್ತ ತಾಲೂಕು ಪಂಚಾಯತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನರಗುಂದ ನಗರದ ಬಸ್ ನಿಲ್ದಾಣದಲ್ಲಿ ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಾರ್ವಜನಿಕರಿಗೆ ರೆಡ್ ರೋಸ್ ನೀಡಿ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಿದರು.

ತಾಲೂಕು ಪಂಚಾಯತ ಇಒ ಮತ್ತು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಸೋಮಶೇಖರ್ ಬಿರಾದಾರ, ಪಂಚಾಯತ್ ರಾಜ್ ದಿವಸ್ ಅಂಗವಾಗಿ ಇಂದು ಸಾರ್ವಜನಿಕರ ಸ್ಥಳಗಳಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಲೋಕಸಭೆ ಚುನಾವಣೆಯ ಮತದಾನ ವೇಳೆ ನಿಮ್ಮ-ನಿಮ್ಮ ಗ್ರಾಮಗಳಲ್ಲಿ ಕಡ್ಡಾಯವಾಗಿ ಎಲ್ಲ ಪ್ರಯಾಣಿಕರು ಮಾಡಬೇಕೆಂದರು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮೇ-7 ರ ಮತದಾನ ದಿನವನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲೇ ಇದ್ದರೂ ಆ ಮತದಾನ ದಿನ ಊರಿಗೆ ಬಂದು ಮತ ಚಲಾಯಿಸುವ ಕೆಲಸವಾಗಬೇಕು.  

ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಸಂತೋಷಕುಮಾರ್ ಪಾಟೀಲ್ ಮಾತನಾಡಿ, ಆಟೋ ರಿಕ್ಷಾ ಮೂಲಕ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಾರೆ. ಆಟೋ ರಿಕ್ಷಾ ಚಲಾಯಿಸುವವರು ತಮ್ಮ ರಿಕ್ಷಾದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಮತದಾನ ಮಾಡಲು ತಿಳಿಹೇಳಬೇಕು. ಈ ಮೂಲಕ ದೇಶದ ಚುನಾವಣೆಯ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ನಗರದ ಬಸ್ ನಿಲ್ದಾಣ ಮೂಲಕ ಬೇರೆ-ಬೇರೆ ಗ್ರಾಮಗಳಿಗೆ, ಜಿಲ್ಲೆಗಳಿಗೆ, ರಾಜ್ಯಗಳಿಗೆ ಸಂಚರಿಸುವ ಪ್ರಯಾಣಿಕರ ಕೈ ಗೆ ರೆಡ್ ರೋಸ್ ನೀಡಿ ಮತದಾನ ಮಾಡುವ ಸಂಕಲ್ಪ ಮಾಡೋಣ  ಎಂದು ಅಧಿಕಾರಿ ವರ್ಗ ಮತದಾನ ಅರಿವು ಮೂಡಿಸಿದರು. ಅಲ್ಲದೆ ನಿಲ್ದಾಣದ ಆಟೋ ರೀಕ್ಷಾ ಸವಾರರನ್ನು ಭೇಟಿಯಾಗಿ ಅವರಿಗೆ ರೋಸ್ ನೀಡಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿ ಮತದಾನ ಮಾಡಿ ಮತ್ತು ಪ್ರಯಾಣಿಕರಿಗೆ ಮತದಾನ ಮಾಡುವಂತೆ ತಿಳಿಹೇಳಿ ಅಂತ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಆನಂದ ಭೋವಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಶ್ರೀಮತಿ ಕೃಷ್ಣಮ್ಮ ಹಾದಿಮನಿ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್, ತಾಲೂಕಿನ  ಗ್ರಾಮ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ, ಬಸ್ ನಿಲ್ದಾಣದ ವ್ಯವಸ್ಥಾಪಕರು ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ, ತಾಲೂಕು ಪಂಚಾಯತ ಸಿಬ್ಬಂದಿ ವರ್ಗ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net