

ಗದಗ: ವಿಶ್ವ ಮಧುಮೇಹ ದಿನದ ಅಂಗವಾಗಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗ, ತಂಬಾಕು ನಿಯಂತ್ರಣಕೋಶ ಹಾಗೂ ಮನೋರಮಾ ಕಾಲೇಜ್ ಗದಗ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ “ಮಧುಮೇಹ” ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿ ಡಾ. ವೆಂಕಟೇಶ ರಾಠೋಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವ ಮಧುಮೇಹ ದಿನಾಚರಣೆಯನ್ನು ಪ್ರತಿ ವರ್ಷ ನವೆಂಬರ್-14 ರಂದು ಆಚರಿಸಲಾಗುತ್ತಿದ್ದು, ಅಸಾಂಕ್ರಾಮಿಕ ರೋಗಗಳಲ್ಲಿ ಮಧುಮೇಹವು ಪ್ರಮುಖವಾಗಿದ್ದು, ಮಧುಮೇಹದಿಂದಾಗಿ ಕುರುಡುತನ, ಕಿಡ್ನಿ ವೈಫಲ್ಯ, ಹೃದಯ ಸಂಬAಧಿತ ಖಾಯಿಲೆ, ಪಾರ್ಶ್ವವಾಯು ಮತ್ತು ಅಂಗವೈಕಲ್ಯತೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಎಂದು ತಿಳಿಸಿದರು.
ವಿಶ್ವ ಮಧುಮೇಹ ದಿನಾಚರಣೆಯ ಈ ವರ್ಷದ ಘೋಷವಾಖ್ಯೆ “ಮಧುಮೇಹ ಮತ್ತು ಯೋಗಕ್ಷೇಮ” ಅಂದರೆ ಮಧುಮೇಹ ರೋಗದ ಕುರಿತು ಆರೋಗ್ಯ ಶಿಕ್ಷಣ ಸಾರ್ವಜನಿಕರಿಗೆ ನೀಡಿದಲ್ಲಿ ಮಧುಮೇಹ ಖಾಯಿಲೆ, ಮಧುಮೇಹದ ತೀವ್ರತೆ ಮತ್ತು ಮಧುಮೇಹದಿಂದಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಹಾಗೂ ತಡೆಗಟ್ಟಬಹುದು ಎಂದರು .
ಒಂದು ವರ್ಷದಲ್ಲಿ ಸರಿ ಸುಮಾರು 6 ಕೋಟಿ ಜನರು ಮರಣ ಹೊಂದುತ್ತಿದ್ದು, ಇವರಲ್ಲಿ 4 ಕೋಟಿ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದಲೇ ಮರಣ ಹೊಂದುತ್ತಿದ್ದಾರೆ, ಅದೇ ರೀತಿ ಭಾರತದಲ್ಲಿ ಒಂದು ವರ್ಷದಲ್ಲಿ ಸರಿಸುಮಾರು 1 ಕೋಟಿ ಮರಣ ಹೊಂದುತ್ತಿದ್ದು ಇವರಲ್ಲಿ 67 ಲಕ್ಷ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ, ನಮ್ಮ ದೇಶದಲ್ಲಿ ಸುಮಾರು 7.7 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇಂಟರ್‌ನ್ಯಾಶನಲ್ ಡಯಾಬೀಟಿಸ್ ಫೇಡರೇಶನ್ ಸಂಸ್ಥೆಯು ಭಾರತದಲ್ಲಿ 2045ಕ್ಕೆ ಸೂಮಾರು 13.4 ಕೋಟಿ ಮಧುಮೇಹದಿಂದ ಬಳಲುವವರ ಸಂಖ್ಯೆ ಹೆಚ್ಚಾಗಬಹುದೆಂದು ಅಂದಾಜಿಸಿದ್ದಾರೆ ಎಂದು ತಿಳಿಸಿದರು. ಮಧುಮೇಹದ ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳಾದ ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ, ತಂಬಾಕು ಬಳಕೆ, ಮದ್ಯಪಾನ ಸೇವನೆ ಹಾಗೂ ಮಾನಸಿಕ ಒತ್ತಡದಿಂದ ಮಧುಮೇಹ ರೋಗಿಗಳ ಮತ್ತು ಅಸಾಂಕ್ರಾಮಿಕ ರೋಗಿಗಳು ಹೆಚ್ಚಾಗುತ್ತಿದ್ದಾರೆ ಎಂದು ತಿಳಿಸಿದರು.
ಡಾ. ರವಿ ಕಡಗಾವಿ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಸಂಯೋಜಕರು ಮಾತನಾಡಿ ಬಹಳಷ್ಟು ಜನರಿಗೆ ಮಧುಮೇಹದ ಬಗ್ಗೆ ಅರಿವು ಇರದಿರುವುದರಿಂದ 30 ವರ್ಷ ಮೇಲ್ಪಟ್ಟವರು ವರ್ಷದಲ್ಲಿ ಕನಿಷ್ಠ ಒಂದು ಬಾರಿ ಕಡ್ಡಾಯವಾಗಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು, ಇದರಿಂದ ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಮುಂದೆ ಆಗಬಹುದಾದ ತೊಂದರೆ (ತೊಡಕುಗಳನ್ನು) ತಡೆಗಟ್ಟಬಹುದೆಂದು ತಿಳಿಸಿದರು. ಇದನ್ನು ತಡೆಯುವುದು ನಮ್ಮೆಲ್ಲರ ಕೈಯಲ್ಲಿದೆ ನಾವು ಆರೋಗ್ಯವಾಗಿರಲು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ನಿಯಮಿತವಾಗಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯು ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್.ಸಿ.ಡಿ. ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 2025 ರ ಒಳಗಾಗಿ ಸುಮಾರು 25% ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಮನೋರಮಾ ಕಾಲೇಜ್ ಪ್ರಾಂಶುಪಾಲರಾದ ಬಿ.ಎಸ್.ಹಿರೇಮಠ ರವರು ಮಧುಮೇಹ ಕುರಿತು ಮಾತನಾಡುತ್ತ ಆಧುನಿಕ ಜೀವನ ಶೈಲಿಯ ಬದಲಾವಣೆ ಅಗತ್ಯವಾಗಿದ್ದು ನಿಯಮಿತ ವ್ಯಾಯಾಮ, ಯೋಗ, ಆರೋಗ್ಯಕರ ಆಹಾರ ಸೇವನೆ ಮತ್ತು ದುಶ್ಚಟಗಳಿಂದ ದೂರವಿದ್ದರೆ ಅಸಾಂಕ್ರಾಮಿಕ ರೋಗಗಳಿಂದಾಗುತ್ತಿರುವ ಸಾವು ನೋವುಗಳನ್ನು ಕಡಿಮೆ ಮಾಡಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಪ್ರವೀಣ ನಿಡಗುಂದಿ, ಎಪಿಡೆಮಿಯೊಲಾಜಿಸ್ಟ್, ಗೋಪಾಲ ಸುರಪುರ, ಜಿಲ್ಲಾ ಸಲಹೆಗಾರರು ತಂಬಾಕು ನಿಯಂತ್ರಣ ಕೋಶ, ಮನೋರಮಾ ಕಾಲೇಜಿನ ವ್ಯವಸ್ಥಾಪಕರಾದ ಕಿಶೋರ ಮುದಗಲ್ ಕಾಲೇಜಿನ ಎಲ್ಲ ಉಪನ್ಯಾಸಕರು, ಆಡಳಿತ ವರ್ಗದವರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಸಮೀಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುತ್ತನಗೌಡ ಸಿ. ರಬ್ಬನಗೌಡ ಅವರು ನಿರೂಪಿಸಿ ವಂದಿಸಿದರು.