

ಗದಗ: ನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ತಿಳಿಸಿದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ 155 ನೇ ಜನ್ಮದಿನಾಚರಣೆ ಅಂಗವಾಗಿ ಗದಗ ಬೆಟಗೇರಿ ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಮಹಾತ್ಮ ಗಾಂಧೀ ವೃತ್ತದಲ್ಲಿ ಬುಧವಾರ ಸ್ವಚ್ಛತೆ ಮಾಡುವ ಮೂಲಕ ಶ್ರಮದಾನ ಕಾರ್ಯ ಕೈಗೊಳ್ಳಲಾಯಿತು.
ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಮಹಾತ್ಮ ಗಾಂಧೀ ವೃತ್ತದಲ್ಲಿ ಶ್ರಮದಾನಕ್ಕೆ ಚಾಲನೆ ನೀಡುವ ಮೂಲಕ ಗಾಂಧೀಜಿಯವರ ಸ್ವಚ್ಛ ಭಾರತ ಪರಿಕಲ್ಪನೆಗೆ ಮುಂದಾದರು. ಗಾಂಧೀ ಜಯಂತಿ ಅಂಗವಾಗಿ ಜರುಗುತ್ತಿರುವ ಸ್ಚಚ್ಛತಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಹಾಗೂ ಸಮಂಜಸವಾಗಿದೆ. ಎಲ್ಲರೂ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಅನೇಕ ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ ಎಂದು ತಿಳಿಸುತ್ತಾ ಎಲ್ಲರಿಗೂ ಗಾಂಧೀ ಜಯಂತಿ ಶುಭಾಶಯಗಳು ಎಂದರು.
ಈ ಶ್ರಮದಾನ ಕಾರ್ಯದಲ್ಲಿ ಗದಗ ರೆಡ್ ಕ್ರಾಸ್ ಸಂಸ್ಥೆ , ಎನ್.ಸಿ.ಸಿ ವಿದ್ಯಾರ್ಥಿಗಳು, ನಗರಸಭೆಯ ಪದವಿ ಪೂರ್ವ ಕಾಲೇಜ್ ಸೇರಿದಂತೆ ವಿವಿಧ ಇಲಾಖೆ, ಸಂಘಟನೆಗಳು ಪಾಲ್ಗೊಳ್ಳುವ ಮೂಲಕ ಶ್ರಮದಾನವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲಿಸ ವರಿಷ್ಟಾಧಿಕಾರಿ ಎಂ.ಬಿ. ಸಂಕದ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ನಗರಸಭೆಯ ಅಧಿಕಾರಿಗಳಾದ ಆನಂದ ಬದಿ, ಹುಚ್ಚೇಶ್ವರ ಬಂಡಿವಡ್ಡರ ಸೇರಿದಂತೆ ನಗರಸಭೆಯ ಸದಸ್ಯರು , ಸಿಬ್ಬಂದಿಗಳು ಹಾಜರಿದ್ದು ಶ್ರಮದಾನದಲ್ಲಿ ಪಾಲ್ಗೊಂಡರು.