

ವಿಜಯವಾಣಿ ಸುದ್ದಿಜಾಲ ಗದಗ
ಪ್ರಕೃತಿಯ ಎಲ್ಲ ಚರಾಚರ ವಸ್ತುಗಳಲ್ಲಿ ಒಂದು ಶಕ್ತಿ ಇರುತ್ತದೆ. ಅದನ್ನು ಗುರುತಿಸಿಕೊಂಡು ಉಪಯೋಗಿಸಿಕೊಂಡರೆ ಮನುಷ್ಯನಿಗೆ ಸಾವಿರಾರು ಲಾಭಗಳು ದೊರೆಯುತ್ತವೆ. ಹಾಗೆಯೇ ಮಕ್ಕಳಲ್ಲಿಯೂ ಯಾವುದಾದರು ಒಂದು ಪ್ರತಿಭೆ ಇದ್ದೇ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಸ್ಪರ್ಧೆಗಳು ಪ್ರಮುಖವಾಗಿವೆ ಎಂದು ಲೋಕೋಪಯೋಗಿ ಇಲಾಖೆಯ ಸಾಂಖಿಕ ನಿರೀಕ್ಷಕ ಮಹಾಂತೇಶ ಕರಕಿಕಟ್ಟಿ ಹೇಳಿದರು.
ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಗುರುವಾರ ಜರುಗಿದ ಉಚಿತ ಯೋಗಾಸನ ಕ್ರೀಡಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಲ್ಲಿ ಕಲಿಕಾ ಮನೋ ಭಾವ ಹೆಚ್ಚುತ್ತದೆ. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರಂತೂ ಕಲಿಕಾಭಾವ ಇಮ್ಮಡಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಲು ಸ್ಪರ್ಧೆಗಳು ಹೆಚ್ಚು ಸಹಕಾರಿಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ. ಎಸ್. ಪಲ್ಲೆದ, ಇತ್ತೀಚೆಗೆ ಯೋಗಾಸನ ಕ್ರೀಡೆಯನ್ನು ಒಲಿಂಪಿಕ್ ಕ್ರೀಡೆಗಳಲ್ಲಿ ಸೇರಿಸುವ ಪ್ರಯತ್ನಗಳು ಉನ್ನತ ಹಂತದಲ್ಲಿ ನಡೆದಿವೆ. ಈಗಾಗಲೇ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲಿ ಯೋಗಾಸನ ಕ್ರೀಡೆಯನ್ನು ಕಡ್ಡಾಯಗೊಳಿಸಲಾಗಿದೆ. ಯೋಗಾಸನ ಕ್ರೀಡೆಯನ್ನು ನಾವೆಲ್ಲರೂ ಪ್ರೋತ್ಸಾಹಿಸಿದರೆ ಪ್ರಚಲಿತದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
ವಿಜಯಲಕ್ಷಿ$್ಮ ಆನೆಹೊಸೂರು, ಚೇತನ ಚುಂಚಾ, ನಿವೃತ್ತ ಕೆ.ವಿ.ಜಿ. ಬ್ಯಾಂಕ್ ಅಧಿಕಾರಿ ಎಂ. ಎಂ. ನರವಣಿ ಇದ್ದರು.