

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಸಹಯೋಗ ಹಾಗೂ ನಗರದ ಐಎಂಎ ರಕ್ತಭಂಡಾರ ರವರ ಸಹಕಾರದೊಂದಿಗೆ ವಿದ್ಯಾದಾನ ಸಮಿತಿಯ ಬಿ. ಎಡ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗದಗ ನಗರದ ಹೆಸರಾಂತ ವೈದ್ಯರಾದ ಹಾಗೂ ಐಎಂಎ ಮಾಜಿ ಅಧ್ಯಕ್ಷರಾದ ಡಾ. ಪ್ಯಾರಾಲಿ ನೂರಾನಿ ಹಾಗೂ ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ರವರು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿಬಿರದ ಉದ್ಘಾಟಕರ ಡಾ. ಪ್ಯಾರಾಲಿ ನೂರಾನಿ ಯವರು ರಕ್ತದಾನದಿಂದ ರಕ್ತದೊತ್ತಡ ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ಸಿಗುತ್ತದೆ. ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 40 ದಶಲಕ್ಷ ಕ್ಕಿಂತ ಹೆಚ್ಚು ಯೂನಿಟ್ ರಕ್ತದ ಕೊರತೆ ಎದುರಾಗುತ್ತಿದೆ, ಸಮಯಕ್ಕೆ ಸರಿಯಾಗಿ ರಕ್ತ ಸಿಗದೇ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಬಿ. ಎಡ್ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಜನಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿವೆ. ನಾವು ಮೊದಲು ಜನ ಜಾಗೃತಿ ಅಭಿಯಾನ ಮೂಲಕ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ಮನುಷ್ಯ ರಕ್ತದಾನ ಮಾಡಿದರಷ್ಟೇ ರಕ್ತದ ಉತ್ಪಾದನೆ ಸಾಧ್ಯ, ನಮ್ಮ ಹಿರಿಯರು ಹೇಳಿದಂತೆ ರಕ್ತ ಕೊಟ್ಟು ನೋಡು, ಸಂಬಂಧ ಕಟ್ಟಿ ನೋಡು ಎಂಬಂತೆ ನಾವು ರಕ್ತದಾನ ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೆ ವೇಳೆ ಕಾಲೇಜಿನ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ತಾವು ಮೊದಲು ರಕ್ತದಾನ ಮಾಡಿ ಪ್ರಶಿಕ್ಷಣಾರ್ಥಿಗಳಿಗೆ ಮಾದರಿಯಾದರು. ನಂತರ ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ ಹರ್ತಿ, ವಿಜಯ ಲಂಬಾಣಿ, ವಿನೋದ ಕುಮಾರ ಪೂಜಾರಿ, ಮಲ್ಲಿಕಾರ್ಜುನ ಉದ್ಧಾರ, ಜಯಪ್ರಕಾಶ ಹಿರೇಮಠ, ವಿಶ್ವ ಪ್ರಸಾದ, ಭಾರತಿ ಬಂಡಿ ರವರು ರಕ್ತದಾನ ಮಾಡಿದರು.
ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಡಾ. ಪ್ಯಾರಾಲಿ ನೂರಾನಿ, ಶ್ರೀ ಶ್ರೀನಿವಾಸ ಹುಯಿಲಗೋಳ, ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ, ಶ್ರೀ ಪ್ರತೀಕ. ಎಸ್. ಹುಯಿಲಗೋಳ, ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ, ಶ್ರೀ ವಾದಿರಾಜ ಕಾತೊಟೆ, ಐಎಂಎ ರಕ್ತ ಬಂಡಾರ ಕೇಂದ್ರದ ಸಿಬ್ಬಂದಿ ವರ್ಗದವರು, ಕಾಲೇಜಿನ ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.