

ಅಥಣಿ: ಮಹಾತಪಸ್ವಿ ಲಿಂ.ಮುರುೇಂದ್ರ ಶಿವಯೋಗಿಗಳು ಈ ನಾಡಿನಲ್ಲಿ ಪ್ರಪ್ರಥಮ ಬಾರಿಗೆ ಬಸವ ಜಯಂತಿ ಆಚರಿಸಿದ ಮಹಾಮಹಿಮರು. ಬಸವಣ್ಣನವರನ್ನು ಅಪ್ಪ ಎಂದು ಕರೆದ ನಾಡಿನ ಏಕೈಕ ಶಿವಯೋಗಿಗಳು ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಲಿಂ.ಮುರುಘೇಂದ್ರ ಶಿವಯೋಗಿಗಳ 189ನೇ ಜಯಂತಿ ಅಂಗವಾಗಿ ಗಚ್ಚಿನಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣನವರ ವಚನಗಳನ್ನೇ ಬದುಕಿನುದ್ದಕ್ಕೂ ಪಾಲಿಸಿಕೊಂಡು ನಡೆದು ಶ್ರೀಮಠದಲ್ಲಿ ಅನ್ನದಾಸೋಹ, ಶಿಕ್ಷಣ, ಆಶ್ರಯ ನೀಡುವಂತೆ ಪ್ರೇರಣೆ ನೀಡಿದವರು ಮುರುೇಂದ್ರ ಶಿವಯೋಗಿಗಳು. ಗಚ್ಚಿನಮಠವು ನಾಡಿಗೆ ಮಾದರಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಬಸವಕಿರಣ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಆಶೀರ್ವದಿಸಿದ ಮುರುೇಂದ್ರ ಶಿವಯೋಗಿಗಳು ಜೀವಿಸಿದ ಪವಿತ್ರ, ಜಾಗೃತ ಸ್ಥಳ ಇಂದು ಐತಿಹಾಸಿಕ ತಾಣವಾಗಿದೆ ಎಂದರು. ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು, ಬಸವರಾಜ ದೇವರು ಇತರರು ಇದ್ದರು.
ಪಲ್ಲಕ್ಕಿ ಉತ್ಸವ: ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ವಚನಾಭಿಷೇಕ, ಮಹಾಮಂಗಳರಾತಿ ನಂತರ ಶಿವಯೋಗಿಗಳ ಭಾವಚಿತ್ರ ಮತ್ತು ವಚನ ಸಂಪುಟಗಳನ್ನಿಟ್ಟ ಪಲ್ಲಕ್ಕಿ ಉತ್ಸವವು ಸಕಲ ವಾದ್ಯವೃಂದಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಗಚ್ಚಿನಮಠದಲ್ಲಿ ಸಮಾವೇಶಗೊಂಡಿತು. ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು.