ಮತ್ತೆ ಆದಾಯ ಹೆಚ್ಚಿಸಿಕೊಂಡ ‘ಘಾಟಿ ಸುಬ್ರಹ್ಮಣ್ಯ’

gaati
gaati temple
Published on

*2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 13.65 ಕೋಟಿ ರೂ.ವರಮಾನ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲ ಪ್ರಸಕ್ತ ಸಾಲಿನಲ್ಲಿ 13.65 ಕೋಟಿ ರೂ. ಆದಾಯ ಪಡೆಯುವ ಮೂಲಕ ಕಳೆದ ವರ್ಷದ ದಾಖಲೆಯನ್ನು ಸರಿಗಟ್ಟಿದೆ.
2022-23ರಲ್ಲಿ ಮುಜರಾಯಿ ಇಲಾಖೆಗೆ ಆದಾಯ ತರುವ ಪ್ರಮುಖ 10 ದೇಗುಲಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮೊದಲ ಸ್ಥಾನದಲ್ಲಿದ್ದರೆ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಹೋಬಳಿಯಲ್ಲಿನ ಘಾಟಿ ಸುಬ್ರಹ್ಮಣ್ಯ ದೇಗುಲ ಟಾಪ್ 9ರ ಸ್ಥಾನ ಪಡೆಯುವ ಜತೆಗೆ ಬರೋಬ್ಬರಿ 12.25 ಕೋಟಿ ರೂ.ಆದಾಯ ದಾಖಲಿಸಿತ್ತು. 2023-24ರಲ್ಲಿ 13.65 ಕೋಟಿ ರೂ. ಆದಾಯ ಗಳಿಸುವ ಮೂಲಕ ಕಳೆದ ವರ್ಷಕ್ಕಿಂತ 1.4 ಕೋಟಿ ರೂ. ಹೆಚ್ಚು ಆದಾಯಗಳಿಸಿದೆ.
ಕಾಣಿಕೆ ಹುಂಡಿ ಪ್ರಮುಖ: ಒಟ್ಟು ಆದಾಯದಲ್ಲಿ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗುವ ಆದಾಯದ್ದೇ ಸಿಂಹಪಾಲಾಗಿದೆ. ಉಳಿದಂತೆ ದಾನಿಗಳ ದೇಣಿಗೆ, ವಿವಿಧ ಪೂಜಾಸೇವೆಯಿಂದ ಸಂಗ್ರಹವಾದ ಕಾಣಿಕೆ, ಯಾತ್ರಿನಿವಾಸದ ಬಾಡಿಗೆ, ವಿವಿಧ ಗುತ್ತಿಗೆ, ಹರಕೆ ಸೇವೆ, ಅನುದಾನ, ಶಾಶ್ವತ ಸೇವೆ ಸೇರಿ ವಿವಿಧ ಮೂಲಗಳಿಂದ ಕೋಟ್ಯಂತರ ರೂ. ಆದಾಯ ತರುತ್ತಿರುವ ಈ ಕ್ಷೇತ್ರ ದಿನದಿನೇ ಮತ್ತಷ್ಟು ಪ್ರವರ್ಧಮಾನಕ್ಕೆ ಬರುತ್ತಿದೆ.

ಪ್ರಾಧಿಕಾರದ ಬಳಿಕ ಮತ್ತಷ್ಟು ಆದಾಯ! ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರಾಧಿಕಾರ ರಚಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದ್ದು, ಶ್ರೀ ಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ಧಿ ಸ್ಪರ್ಶ ಸಿಗಲಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ವಿಶೇಷ ಸಭೆ ನಡೆದಿದ್ದು. ಘಾಟಿಗೆ ಪ್ರಾಧಿಕಾರ ರಚಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಘಾಟಿಯಲ್ಲಿ ಆಗಬೇಕಾದ ಹಲವು ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆದಾಯದಲ್ಲಿ ಮತ್ತಷ್ಟು ದಾಖಲೆ ಕಾಣಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

ನಾಗರಾಧನೆಗೆ ಪ್ರಸಿದ್ಧ: ನಾಗರಾಧನೆಯ ಪ್ರಮುಖ ದೇಗುಲವಾಗಿ ಗುರುತಿಸಿಕೊಂಡಿರುವ ಶ್ರೀ ಘಾಟಿ ಕ್ಷೇತ್ರದಲ್ಲಿನ ನಾಗರಕಲ್ಲು (ನಾಗರಕಟ್ಟೆ)ಗೆ ಹಾಲೆರೆಯುವ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ, ನಾಗರಪಂಚಮಿಯಂದು ಭಕ್ತಸಾಗರವೇ ಹರಿದುಬರುತ್ತದೆ, ದೊಡ್ಡಬಳ್ಳಾಪುರದಿಂದ 14 ಕಿಮೀ, ಬೆಂಗಳೂರಿನಿಂದ 51 ಕಿಮೀ ದೂರದಲ್ಲಿದ್ದು ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿದೆ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ. ಎಸ್.ಎಸ್.ಘಾಟಿ ಎಂದು ಕರೆಯಲ್ಪಡುವ ಕ್ಷೇತ್ರಕ್ಕೆ ಆಡುಭಾಷೆಯಲ್ಲಿ ಸುಬ್ರಾಯನ ಘಾಟಿ ಎಂದೂ ಕರೆಯಲಾಗುತ್ತದೆ. ಘಾಟಿ ಸುಬ್ರಹ್ಮಣ್ಯ ಗ್ರಾಪಂ ಕೇಂದ್ರವಾಗಿದ್ದು, ತೂಬಗೆರೆ ಮಂಡಲ ಪಂಚಾಯಿತಿಯಿಂದ ಬೇರ್ಪಟ್ಟು 1993ರಲ್ಲಿ ಸ್ವತಂತ್ರ್ಯ ಗ್ರಾಮ ಪಂಚಾಯಿತಿಯಾಗಿ ಮಾರ್ಪಟ್ಟಿತ್ತು.

ಸರ್ಕಾರದ ಶಕ್ತಿ ಯೋಜನೆ ಬಳಿಕ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಬೆಂಗಳೂರಿನಿಂದ ನೇರ ಬಸ್ ಸೌಕರ್ಯ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಸೌಲಭ್ಯವಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಾರಾಂತ್ಯಗಳು ಸೇರಿ ವಿಶೇಷ ದಿನಗಳಂದು ಭಕ್ತಸಾಗರವೇ ಹರಿದುಬರುತ್ತಿದೆ. ಇದರಲ್ಲಿ ಕಾಣಿಕೆ ಹುಂಡಿ ಪ್ರಮುಖವಾಗಿದ್ದರೆ ಇತರೆ ಆದಾಯ ಮೂಲಗಳಿಂದ ಹಣ ಬರುತ್ತಿದೆ.
ನಾಗರಾಜ್, ಇಒ ಘಾಟಿ ದೇಗುಲ

ಪೊಟೋ ಘಾಟಿ ಟೆಂಪಲ್ ಪೋಲ್ಡರ್‌ನಲ್ಲಿದೆ())

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net