ರಾಜ್ಯದ 9ನೇ ಶ್ರೀಮಂತ ದೇಗುಲ ‘ಘಾಟಿ ಸುಬ್ರಹ್ಮಣ್ಯ’

gaati temple
Published on

ಇಲಾಖೆಗೆ 12.25ಕೋಟಿ ರೂ.ಆದಾಯ

ಪ್ರಮುಖ ಧಾರ್ಮಿಕ ಕ್ಷೇತ್ರ

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಹೋಬಳಿಯ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲ ರಾಜ್ಯದ 9ನೇ ಶ್ರೀಮಂತ ದೇಗುಲವಾಗಿ ಹಿರಿಮೆ ಹೆಚ್ಚಿಸಿಕೊಂಡಿದೆ.
ಮುಜರಾಯಿ ಇಲಾಖೆಗೆ ಆದಾಯ ತರುವ ಪ್ರಮುಖ 10 ದೇಗುಲಗಳ ಪಟ್ಟಿ ಬಿಡುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮೊದಲ ಸ್ಥಾನದಲ್ಲಿದ್ದರೆ ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ದೇಗುಲ ಟಾಪ್ 9ರ ಸ್ಥಾನ ಪಡೆದುಕೊಂಡಿದೆ. 2022-23 ನೇ ಸಾಲಿನಲ್ಲಿ ಬರೋಬ್ಬರಿ 12.25 ಕೋಟಿ ರೂ.ಆದಾಯ ಕಂಡಿರುವ ಈ ಕ್ಷೇತ್ರ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದೆ. ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ, ದಾನಿಗಳ ದೇಣಿಗೆ, ವಿವಿಧ ಪೂಜಾಸೇವೆಯಿಂದ ಸಂಗ್ರಹವಾದ ಕಾಣಿಕೆ, ಯಾತ್ರಿನಿವಾಸದ ಬಾಡಿಗೆ ಸೇರಿ ವಿವಿಧ ಮೂಲಗಳಿಂದ ಕೋಟ್ಯಂತರ ರೂ.ಆದಾಯ ತರುತ್ತಿರುವ ಈ ಕ್ಷೇತ್ರ ದಿನೇದಿನೆ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದೆ.

ನಾಗಾರಾಧನೆಗೆ ಪ್ರಸಿದ್ಧ: ನಾಗಾರಾಧನೆಯ ಪ್ರಮುಖ ದೇಗುಲವಾಗಿ ಗುರುತಿಸಿಕೊಂಡಿರುವ ಶ್ರೀ ಘಾಟಿ ಕ್ಷೇತ್ರದಲ್ಲಿನ ನಾಗರಕಲ್ಲು (ನಾಗರಕಟ್ಟೆ)ಗೆ ಹಾಲೆರೆಯುವ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ, ನಾಗರಪಂಚಮಿಯಂದು ಭಕ್ತಸಾಗರವೇ ಹರಿದುಬರುತ್ತದೆ, ದೊಡ್ಡಬಳ್ಳಾಪುರದಿಂದ 14 ಕಿ.ಮೀ, ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿದ್ದು ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿದೆ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ.

2014 ರ ಬಳಿಕ ಮುಂಚೂಣಿಗೆ: ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದರೂ ದೇಗುಲ ಅಭಿವೃದ್ಧಿಯಿಂದ ವಂಚಿತವಾಗಿತ್ತು. 2014 ರ ಬಳಿಕ ದೇಗುಲದ ಅಭಿವೃದ್ಧಿಗೆ ವೇಗ ಸಿಕ್ಕಿತು ಎಂದು ದೇವಾಲಯ ಸಿಒ ಕೃಷ್ಣಪ್ಪ ತಿಳಿಸಿದ್ದಾರೆ. ಈ ಹಿಂದೆ ಧೂಳುಮಯವಾಗಿದ್ದ ರಸ್ತೆಗಳಿಗೆ ಡಾಂಬರು, ಕಾಂಕ್ರೀಟ್ ಹಾಕುವ ಮೂಲಕ ಸುಸಜ್ಜಿತ ರಸ್ತೆಗಳ ನಿರ್ಮಾಣ, ಶಾಪಿಂಗ್ ಕಾಂಪ್ಲೆಕ್ಸ್, ಕಲ್ಯಾಣಿಗಳ ನವೀಕರಣ, ವಿಶಾಲವಾದ ವಾಹನ ನಿಲುಗಡೆ ತಾಣ, ಮುಡಿಭವನಕ್ಕೆ ಹೊಸರೂಪ ಮತ್ತಿತರ ಸೌಲಭ್ಯಗಳು ದೊರೆತವು. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲೂ ಏರಿಕೆ ಕಂಡುಬಂತು ಎಂದು ಅಭಿಪ್ರಾಯಪಟ್ಟಿದ್ದಾರೆ.


ಮತ್ತಷ್ಟು ಅಭಿವೃದ್ಧಿಗೆ ಚಿಂತನೆ: ಪ್ರಸ್ತುತ ದಾಸೋಹ ಸೇವನೆಗಾಗಿ ಇರುವ ಕೊಠಡಿ ಸಾಕಾಗುತ್ತಿಲ್ಲ, ಇದನ್ನು ಮತ್ತಷ್ಟು ವಿಶಾಲಗೊಳಿಸುವ ಚಿಂತನೆ ಇದೆ, ಮಲ್ಟಿ ಪಾರ್ಕಿಂಗ್ ತಾಣ ನಿರ್ಮಾಣ, ಸುಸಜ್ಜಿತ ಕಲ್ಯಾಣ ಮಂಟಪ ಸೇರಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟು ಮೂಲಸೌಕರ್ಯ ಕಲ್ಪಿಸುವ ಚಿಂತನೆ ಇದೆ ಎಂದು ಇಒ ಕೃಷ್ಣಪ್ಪ ತಿಳಿಸಿದ್ದಾರೆ.


ಜಿಲ್ಲೆಯಲ್ಲಿಯೇ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಮುಂಚೂಣಿಯಲ್ಲಿರುವ ಘಾಟಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಅದೇ ರೀತಿ ಆದಾಯವೂ ಹೆಚ್ಚುತ್ತಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಮತ್ತಷ್ಟು ಭಕ್ತರನ್ನು ಸೆಳೆಯುತ್ತಿದೆ. ಇನ್ನು ಕೆಲವೊಂದು ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ನಡೆಸುವ ಸಂಬಂಧ ಯೋಜನೆ ರೂಪಿಸಲಾಗಿದ್ದು ಅವುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

ಕೃಷ್ಣಪ್ಪ, ದೇಗುಲದ ಇಒ

ಮುಜರಾಜಿ ಇಲಾಖೆಗೆ ಆದಾಯ ತರುವ ಪ್ರಮುಖ ದೇಗುಲಗಳ ಸಾಲಿನಲ್ಲಿ ನಮ್ಮ ಘಾಟಿ ದೇಗುಲವೂ ಒಂದಾಗಿರುವುದು ನಿಜಕ್ಕೂ ಸಂತಸ ತಂದಿದೆ. ಬರುವ ದಿನಗಳಲ್ಲಿ ಮುಂದಿನ ಪಟ್ಟಿಗೇರುವ ನಿರೀಕ್ಷೆ ಇದೆ. ದಿನದಿಂದ ದಿನಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದ್ದು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.
ನಾಗೇಂದ್ರ ಶರ್ಮಾ, ಪ್ರಧಾನ ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net