

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಹೋಬಳಿಯಲ್ಲಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಮುಜರಾಯಿ ಇಲಾಖೆಯಿಂದ ಪ್ರಾಧಿಕಾರ ರಚನೆಯಾಗಿದ್ದು, ಇಲಾಖೆಯಿಂದ ವಿವಿಧ ಅಭಿವೃದ್ಧಿ ಕುರಿತು ಮಾಸ್ಟರ್‌ಪ್ಲಾನ್ ಸಿದ್ದವಾಗುತ್ತಿದೆ.
ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿರುವ ಘಾಟಿ ಕ್ಷೇತ್ರದಲ್ಲಿ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ, ದಾನಿಗಳ ದೇಣಿಗೆ, ವಿವಿಧ ಪೂಜಾಸೇವೆಯಿಂದ ಸಂಗ್ರಹವಾದ ಕಾಣಿಕೆ, ಯಾತ್ರಿನಿವಾಸದ ಬಾಡಿಗೆ ಸೇರಿ ವಿವಿಧ ಮೂಲಗಳಿಂದ ಕೋಟ್ಯಂತರ ರೂ.ಆದಾಯ ಬರುತ್ತಿದೆ ಜತೆಗೆ ಶಕ್ತಿ ಯೋಜನೆ ಬಳಿಕ ಮಹಿಳಾ ಭಕ್ತರ ಸಂಖ್ಯೆ ದ್ವಿಗುಣಗೊಂಡಿದೆ. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುವುದರಿಂದ ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಂಬಂಧ ಈ ಮಾಸ್ಟರ್‌ಪ್ಲಾನ್ ಸಿದ್ದವಾಗುತ್ತಿದೆ.
ತಿರುಪತಿ ಮಾದರಿಯಲ್ಲಿ ನಿರೀಕ್ಷಣ ಕೊಠಡಿ: ದಿನೆ ದಿನೇ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರ ಜಮಾವಣೆಯಾಗುತ್ತದೆ ಈ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಸರದಿ ಸಾಲಿನ ಜತೆಗೆ ನಿರೀಕ್ಷಣಾ ಕೊಠಡಿ ನಿರ್ಮಾಣ ಮಾಡುವ ಚಿಂತನೆ ಇದೆ. ದಾಸೋಹ ಭವನದ ನವೀಕರಣ, ಕಾಂಪ್ಲೆಕ್ಸ್ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ದವಾಗುತ್ತಿದೆ ಎನ್ನಲಾಗಿದೆ. ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಗಲೀಕರಣಕ್ಕೆ ಪ್ರಸ್ತಾವನೆ ಇದೆ. ಕಂಟನಕುಂಟೆ-ಘಾಟಿ ಹಾಗೂ ಮಾಕಳಿದುರ್ಗ ಹಾಗೂ ಘಾಟಿ ಮಾರ್ಗದಲ್ಲಿ 100 ಅಡಿ ರಸ್ತೆ ಅಗಲೀಕರಣ ಹಾಗೂ ನಿರ್ಮಾಣ ಸಂಬಂಧ ಪ್ರಸ್ತಾವನೆ ಇದೆ ಎನ್ನಲಾಗಿದೆ.
ವಾರ್ಷಿಕ 13 ಕೋಟಿ ರೂ.ವರಮಾನ: ವಾರ್ಷಿಕ ಏನಿಲ್ಲವೆಂದರೂ ಸುಮಾರು 13 ಕೋಟಿ ರೂ.ನಷ್ಟು ವರಮಾನ ಬರುತ್ತಿದೆ.
ಕಳೆದ ಸಾಲಿನಲ್ಲಿ ಮುಜರಾಯಿ ಇಲಾಖೆಗೆ ಅದಾಯ ತರುವ ಪ್ರಮುಖ 10 ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮೊದಲ ಸ್ಥಾನದಲ್ಲಿದ್ದರೆ ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ದೇಗುಲ ಟಾಪ್ 9 ರ ಸ್ಥಾನ ಪಡೆದುಕೊಂಡಿತ್ತು. 2022-23 ನೇ ಸಾಲಿನಲ್ಲಿ ಬರೋಬ್ಬರಿ 12.25 ಕೋಟಿ ರೂ.ಆದಾಯ ಕಂಡಿರುವ ಈ ಕ್ಷೇತ್ರದಲ್ಲಿ ಮತ್ತಷ್ಟು ಮಹತ್ತರವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಯೋಜನೆ ತಯಾರಾಗುತ್ತಿದೆ.
ಮಲೆಮಹದೇಶ್ವರ ಮಾದರಿ: ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಮೇಲೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇಗುಲದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಂಡಿತು. ಭಕ್ತರಿಂದ ಸಾಕಷ್ಟು ಮೆಚ್ಚುಗೆಗೆ ಕಾರಣವಾಯಿತು. ಇದರಿಂದ ಉತ್ಸಾಹಗೊಂಡ ಇಲಾಖೆ ಇದೇ ಮಾದರಿಯಲ್ಲಿ ಮತ್ತಷ್ಟು ದೇಗುಲಗಳ ಅಭಿವೃದ್ಧಿಗೆ ಆಸಕ್ತಿ ತಾಳಿದೆ ಈ ಪಟ್ಟಿಯಲ್ಲಿ ಘಾಟಿ ದೇಗುಲವೂ ಸೇರ್ಪಡೆಯಾಗಿದೆ.
ಮಲ್ಟಿ ಪಾರ್ಕಿಂಗ್:
ಘಾಟಿ ದನಗಳ ಜಾತ್ರೆ, ಬ್ರಹ್ಮರಥೋತ್ಸವ, ನಾಗರಪಂಚಮಿ ಸೇರಿ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ವೇಳೆ ವಾಹನಗಳ ನಿಲುಗಡೆಗೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಕುಡಿವ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯಗಳಿಗೆ ಸಂಕಷ್ಟ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಮಲ್ಟಿ ಪಾರ್ಕಿಂಗ್, ಶಾಫಿಂಗ್ ಮಾಲ್ ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಪ್ರಾಧಿಕಾರ ರಚನೆಯಾದ ಬಳಿಕ ಮತ್ತಷ್ಟು ಯೋಜನೆಗಳು ಸೇರ್ಪಡೆಯಾಗಿವೆ.
ಗ್ರಾಮಾಂತರ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಮೂರು ದೇಗುಲಗಳ ಪೈಕಿ ಘಾಟಿ ಮುಂಚೂಣಿಯಲ್ಲಿದ್ದು ವಾರ್ಷಿಕ 13 ಕೋಟಿ.ರೂನಷ್ಟು ವರಮಾನವಿದೆ, ನಂತರದಲ್ಲಿ ನೆಲಮಂಗಲ ತಾಲೂಕಿನ ಶಿವಗಂಗೆ ಕ್ಷೇತ್ರವಿದ್ದು ವಾರ್ಷಿಕ ಸುಮಾರು 80 ಲಕ್ಷ ರೂ.ವರಮಾನವಿದೆ ನಂತರದಲ್ಲಿ ನೆಲಮಂಗಲದ ಬೈಲಾಂಜನೇಯ ದೇವಸ್ಥಾನ ಸೇರಿದೆ ಪ್ರಸ್ತುತ ಈ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ.
ಹೇಮಾವತಿ, ಮುಜರಾಜಿ ತಹಸೀಲ್ದಾರ್
ಪ್ರಮುಖ ನಾಗಾರಾಧನೆಯ ಕ್ಷೇತ್ರವಾಗಿರುವ ಶ್ರೀ ಘಾಟಿಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರದ ವತಿಯಿಂದ ಮಾಸ್ಟರ್‌ಪ್ಲಾನ್ ಸಿದ್ದವಾಗುತ್ತಿದೆ. ಇದರಲ್ಲಿ ಏನೆಲ್ಲ ಅಂಶಗಳನ್ನು ಸೇರಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಬಳಿಕ ಇಲಾಖೆ ಸಚಿವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಪ್ರಾಧಿಕಾರ ರಚನೆಯಾದ ಬಳಿಕ ನಡೆದ ಸಭೆಯಲ್ಲಿ ಕೆಲವೊಂದು ಸಲಹೆ ಸೂಚನೆಗಳು ಬಂದಿವೆ ಇವುಗಳ ಅಧಾರದ ಮೇಲೆ ನೀಲಿನಕ್ಷೆ ಸಿದ್ದವಾಗುತ್ತಿದೆ.
ನಾರಾಯಣಸ್ವಾಮಿ, ಘಾಟಿ ದೇಗುಲದ ಇಒ