

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜೂ.13 ರವರೆಗೆ ಮಹಾಗಣಪತಿಯ ಲಕ್ಷ ಮೋದಕ ಹವನ ಮಹೋತ್ಸವ ನೆರವೇರಲಿದೆ.
ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಶಕಟಪುರ ಮಠದ ವಿದ್ಯಾಭಿನವ ಕೃಷ್ಣಾನಂದ ತೀರ್ಥ ಸ್ವಾಮೀಜಿ ಪಾಲ್ಗೊಳ್ಳಲಿದ್ದು, ಖ್ಯಾತ ಸಂಗೀತ ವಿದ್ವಾಂಸ ಚಿಂತಲಪಲ್ಲಿ ಡಾ.ಕೆ.ರಮೇಶ್ ನೇತೃತ್ವದಲ್ಲಿ ಸಂಗೀತ ಕಚೇರಿ, ಡಾ.ಆರ್.ಮಂಜುನಾಥ್ ನೇತೃತ್ವದಲ್ಲಿ ಸ್ಯಾಕ್ಸಾಫೋನ್ ಕಚೇರಿ ನಡೆಯಲಿದೆ.
ಶುಕ್ರವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿಪೂಜೆ, ಮಾತೃಕಾಪೂಜೆ, ದೇವನಾಂದಿ, ಕುಲದೇವತಾ ಸ್ಥಾಪನೆ, ಕೌತುಕಪೂಜೆ, ಪುಣ್ಯಾಹವಾಚನ, ಪ್ರಧಾನ ಸಂಕಲ್ಪ, ಮಹಾಗಣಪತಿ ಮತ್ತು ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಸಂಜೆಗೆ ಯಾಗಶಾಲೆ ಪ್ರವೇಶ, ಕುಂಡಮಂಟಪ ಸಂಸ್ಕಾರ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಕಳಸ ಸ್ಥಾಪನೆ ಕಾರ್ಯಕ್ರಮಗಳು ನಡೆದವು.
11ರಂದು ಬೆಳಗ್ಗೆ ಪವಮಾನ ಹೋಮ, ಗಾಯತ್ರಿ ಹೋಮ. ಸಂಜೆಗೆ ಮೂಲಮಂತ್ರ ಜಪ, ಆಶ್ಲೇಷಾ ಬಲಿ, ಶ್ರೀರುದ್ರ ಜಪ, ರಾಜೋಪಚಾರ ಪೂಜೆ. ಚಿಂತಲಪಲ್ಲಿ ಡಾ ಕೆ.ರಮೇಶ್ ಮತ್ತು ಸಂಗಡಿಗರಿಂದ ಸಂಗೀತ ಕಚೇರಿ ಇದೆ.
ಹಟ್ಟಿಯಂಗಡಿ ಸಿದ್ಧಿವಿನಾಯಕ ದೇಗುಲದ ಧರ್ಮಕರ್ತ ಎಚ್.ಬಾಲಚಂದ್ರ ಭಟ್, ಬ್ರಹ್ಮರ್ಷಿ ಆನಂದ ಸಿದ್ಧಿಪೀಠದ ಸಂಸ್ಥಾಪಕ ಮಹರ್ಷಿ ಆನಂದ ಗುರೂಜಿ, ಕೃಷ್ಣಭಟ್, ಮನೋಜ್ ಕೃಷ್ಣಭಟ್ ಅರ್ಚಕ ಗುರುರಾಜ ಶರ್ಮಾ ಪಾಲ್ಗೊಳ್ಳಲಿದ್ದಾರೆ.