ಹಗ್ಗಾಜಗ್ಗಾಟದ ನಡುವೆ ಘಾಟಿ ಇಒ ವರ್ಗಾವಣೆ

ಹಗ್ಗಾಜಗ್ಗಾಟದ ನಡುವೆ ಘಾಟಿ ಇಒ ವರ್ಗಾವಣೆ
gaati EO krishnappa
Published on

ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಿ.ನಾಗರಾಜ್

ವೈಯಕ್ತಿಕ ದ್ವೇಷವೆಂದ ಕೃಷ್ಣಪ್ಪ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಡಿ.ನಾಗರಾಜು ನಿಯೋಜಿಸಲ್ಪಟ್ಟಿದ್ದಾರೆ.
ಇಲ್ಲಿನ ಇಒ ಆಗಿದ್ದ ಕೃಷ್ಣಪ್ಪ ಅವರನ್ನು ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಘಾಟಿ ಇಒ ಹುದ್ದೆಯ ಹಗ್ಗಾಜಗ್ಗಾಟಕ್ಕೆ ಮುಜರಾಯಿ ಇಲಾಖೆ ಅಂಕುಶ ಹಾಕಿದೆ.

ನ್ಯಾಯಮಂಡಳಿಗೆ ಅರ್ಜಿ: ಮುಜರಾಯಿ ಇಲಾಖೆ ಆಯುಕ್ತರು ಡಿ.ನಾಗರಾಜು ಅವರನ್ನು ಸಿದ್ದಲಿಂಗೇಶ್ವರ ದೇವಾಲಯಕ್ಕೆ ವರ್ಗಾವಣೆ ಮಾಡಿ, ಇವರ ಸ್ಥಾನಕ್ಕೆ ಕೃಷ್ಣಪ್ಪ ಅವರನ್ನು ನೇಮಿಸಿದ್ದರು. ಡಿ.ನಾಗರಾಜು ಅವರು ಸೇವಾ ನಿವೃತ್ತಿಯ ಅಂಚಿನಲ್ಲಿರುವ ಕಾರಣ ವರ್ಗಾವಣೆ ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ 2023 ಏ.1 ರಂದು ಡಿ.ನಾಗರಾಜು ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೃಷ್ಣಪ್ಪ ಮೇಲ್ಮನವಿ ಸಲ್ಲಿಸಿದ್ದರು. ನ.4 ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ ತಕ್ಷಣದಿಂದ ಜಾರಿಗೆ ಬರುವಂತೆ ಸುಬ್ರಮಣ್ಯ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆ ವಹಿಸಿಕೊಳ್ಳುವಂತೆ ಆದೇಶಿಸಿದೆ.

ಕಾದು ನೋಡುವ ತಂತ್ರ: ಇತ್ತ ಕಡೆ ಯಡಿಯೂರು ದೇವಸ್ಥಾನದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕಾಲಾವಕಾಶ ಇರುವುದರಿಂದ ಸದ್ಯಕ್ಕೆ ಕೃಷ್ಣಪ್ಪ ತಟಸ್ಥರಾಗಿದ್ದಾರೆ. ಮರಳಿ ಘಾಟಿಗೆ ಬರುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ.

ಇಒ ವಿರುದ್ಧ ಪತ್ರ: ಘಾಟಿ ಕ್ಷೇತ್ರದ ಹಣಕಾಸು ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇಒ ಕೃಷ್ಣಪ್ಪ ವಿರುದ್ಧ ಜಿಲ್ಲಾಧಿಕಾರಿಗಳು ತನಿಖೆಗಾಗಿ ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ದೇವಸ್ಥಾನದ ಅವರಣದಲ್ಲಿ ಕಲ್ಲುಸಕ್ಕರೆ, ಖರ್ಜೂರ, ಪಂಚಾಮೃತ ಮಾರಾಟ, ಸಿಬ್ಬಂದಿ ಹೊರಗುತ್ತಿಗೆ ನೇಮಕ ಸೇರಿ ಕಾಣಿಕೆ ರೂಪದಲ್ಲಿ ಬಂದ ಚಿನ್ನ ಬೆಳ್ಳಿ ವಸ್ತುಗಳ ಲೆಕ್ಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಯುಕ್ತರಿಗೆ ಪತ್ರ ರವಾನೆಯಾಗಿದೆ. ಇದರ ಬೆನ್ನಲ್ಲೆ ಘಾಟಿ ಕ್ಷೇತ್ರಕ್ಕೆ ಡಿ.ನಾಗರಾಜ್ ಆಗಮನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net