ಜಿಲ್ಲೆಯಲ್ಲಿ ಬೇರು ಬಿಡುತ್ತಿದೆ ಗಾಂಜಾ ದಂಧೆ!

gaanja
ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ಅಪ್ಪೇಗೌಡನಪಾಳ್ಯದ ಬಳಿ ಹೊಲದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
Published on
  • ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
    ರಾಜ್ಯ ರಾಜಧಾನಿಯ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ದಂಧೆ ಬೇರು ಬಿಡುತ್ತಿದೆ. ಜಮೀನುಗಳಲ್ಲಿ ಇತರೆ ಬೆಳೆಗಳೊಂದಿಗೆ ಗಾಂಜಾ ಗಿಡಗಳ ನಾಟಿ ಸದ್ದಿಲ್ಲದೆ ನಡೆಯುತ್ತಿದ್ದು, ಅಮಾಯಕ ರೈತರನ್ನು ಗಾಂಜಾ ದಂಧೆಕೋರರು ಖೆಡ್ಡಾಗೆ ಬೀಳಿಸಿಕೊಳ್ಳುತ್ತಿದ್ದಾರೆಯೇ ಎಂಬ ಶಂಕೆ ಪೊಲೀಸ್ ವಲಯದಲ್ಲಿ ಹರಿದಾಡುತ್ತಿದೆ.
    ಹಿಂದಿನಿಂದಲೂ ಗ್ರಾಮಾಂತರ ಜಿಲ್ಲೆಯಲ್ಲಿ ಗಾಂಜಾ ದಂಧೆ ಸದ್ದು ಮಾಡುತ್ತಲೇ ಇದೆ, ಕರೊನಾ ಲಾಕ್‌ಡೌನ್‌ವೇಳೆ ಇದು ಮತ್ತಷ್ಟು ವ್ಯಾಪಿಸಿತ್ತು. ಸರಕುಸಾಗಣೆ ವಾಹನಗಳ ತಪಾಸಣೆ ಬಗ್ಗೆ ಪೊಲೀಸರು ತೋರಿದ ಮೃದುಧೋರಣೆಯನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಗೂಡ್ಸ್ ವಾಹನಗಳ ಮೂಲಕ ಸುಲಭವಾಗಿ ಗಾಂಜಾ ಸಾಗಿಸುತ್ತಿದ್ದರು ಎಂಬುದು ಸಿಕ್ಕಿಬಿದ್ದ ಪ್ರಕರಣಗಳಲ್ಲಿ ಬಯಲಾಗಿತ್ತು. ಕಳೆದೆರಡು ವರ್ಷದ ಹಿಂದೆ ಗಾಂಜಾ ಮಾಫಿಯಾ ಬೆನ್ನುಬಿದ್ದಿದ್ದ ಜಿಲ್ಲಾ ಅಬಕಾರಿ ಇಲಾಖೆ ‘ಸರ್ಚ್ ಅಪರೇಷನ್’ ಹೆಸರಿನಲ್ಲಿ ಕೂಬಿಂಗ್ ಆರಂಭಿಸಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಗಾಂಜಾ ದಂಧೆ ಸದ್ದಡಗಿತ್ತು. ಸರ್ಚ್ ಆಪರೇಷನ್‌ಗೆ ಭಯಬಿದ್ದ ರೈತರು ಜಮೀನುಗಳಲ್ಲೇ ಗಾಂಜಾ ಸಸಿಗಳನ್ನು ಸುಟ್ಟು ಅಪಾಯದ ಸುಳಿಯಿಂದ ಪಾರಾಗಿದ್ದರು. ಏತನ್ಮಧ್ಯೆ ಕಳೆದೆರಡು ತಿಂಗಳ ಹಿಂದೆ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಲ್ಲಿ ಜಮೀನುಗಳಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಗಾಂಜಾ ಬೇರು ಗಟ್ಟಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
    ರೈತರನ್ನು ಪ್ರೇರೇಪಿಸುತ್ತಿರುವವರು ಯಾರು? ರಾಗಿ, ಜೋಳ ಮತ್ತಿತರ ಧಾನ್ಯ ಬೆಳೆ ಬೆಳೆಯುವ ರೈತರಿಗೆ ಗಾಂಜಾ ನಾಟಿ ಮಾಡುವ ಬಗ್ಗೆ ಯಾರೂ ಉತ್ತೇಜಿಸುತ್ತಿದ್ದಾರೆ, ಯಾರಿಂದ ರೈತರಿಗೆ ಸಂಪರ್ಕ ಸಿಗುತ್ತಿದೆ, ರೈತರು ಹಾಗೂ ದಂಧೆಕೋರರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ರೈತರು ಎಂಬ ಕಾರಣಕ್ಕೆ ಪೊಲೀಸರೂ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎನ್ನಲಾಗಿದ್ದು, ಇದು ಗಾಂಜಾ ದಂಧೆಕೋರರಿಗೆ ವರದಾನವಾಗಿದೆ, ಅಮಾಯಕ ರೈತರಿಗೆ ಆಮಿಷ ತೋರಿಸಿ ಇಂಥ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯವರ್ತಿಗಳು ಯಾರೂ ಯಾರ ಸಂಪರ್ಕದಿಂದ ರೈತರು ಉತ್ತೇಜಿತರಾಗುತ್ತಿದ್ದಾರೆ ಎಂಬ ಜಾಡಿನ ಹಿಂದೆ ಬಿದ್ದಿದ್ದಾರೆ.

ಇತ್ತೀಚಿನ ಪ್ರಕರಣಗಳು:
1 ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಅಪ್ಪೇಗೌಡನಪಾಳ್ಯದ ಬಳಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೊಲದ ಮಾಲಿಕ ಅರಸಪ್ಪ (65) ಎಂಬವರನ್ನು ಬಂಧಿಸಿಸಲಾಗಿತ್ತು 1,67,500 ರೂ ಮೌಲ್ಯದ 16 ಕೆಜಿ 800 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿತ್ತು.

2.ತೂಬಗೆರೆ ಹೋಬಳಿಯ ಗೆದ್ದಲಪಾಳ್ಯದಲ್ಲಿ ಜಮೀನಿನಲ್ಲಿನ ರಾಗಿ, ತೊಗರಿ, ಅವರೆ, ಹಲಸಂದೆ ಸಾಲುಗಳ ಮಧ್ಯೆ ಗಾಂಜಾ ಗಿಡ ಬೆಳೆಸಿದ್ದು, ಅರೋಪಿಯನ್ನು ವಶಕ್ಕೆ ಪಡೆದು92 ಸಾವಿರ ರೂ.ಮೌಲ್ಯದ 8.7 ಕೆಜಿ ತೂಕದ ಒಟ್ಟು 568 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು.

ಹೊಸಕೋಟೆಯಲ್ಲಿ ಏಕಕಾಲಕ್ಕೆ ದಾಳಿ: 3 ವರ್ಷದ ಹಿಂದೆ ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ 14 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದರು. ಹೊಸಕೋಟೆ ನಗರ ಸೇರಿ ಗ್ರಾಮಾಂತರ ಭಾಗದ ಲಾಲ್ ಬಾಗ್ ದಾಸರಹಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ದಾಳಿ ವೇಳೆ ಮಾಲು ಜಪ್ತಿಯಾಗಿದ್ದರೂ ಆರೋಪಿಗಳು ಪರಾರಿಯಾಗಿದ್ದರು.ಇದೇ ವೇಳೆ ನೆಲಮಂಗಲ ತಾಲೂಕಿನಲ್ಲಿ ಬೆಂಗಳೂರು ಮೂಲದ ನಾಲ್ವರು ಗಾಂಜಾ ಅರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತಾಲೂಕಿನ ರಾ.ಹೆ.4 ಗಂಗಾಧರನಪಾಳ್ಯ ಗ್ರಾಮದ ಡೆನ್ಸೋ ಖಾಸಗಿ ಕಾರ್ಖಾನೆ ಪಕ್ಕದಲ್ಲಿ ದಾಳಿ ನಡೆಸಿ1 ಕೆ.ಜಿ 90 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿತ್ತು. ಅದೇ ನೆಲಮಂಗಲ ವ್ಯಾಪ್ತಿಯಲ್ಲಿ 600 ಗ್ರಾಂ ಗಾಂಜಾ ಜಪ್ತಿ ಮಾಡಿದ್ದ ಇಲಾಖೆ ಅರೋಪಿ ವಿರುದ್ಧ ಪ್ರಕರಣ ದಾಖಲಿಸಿತ್ತು. ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಚೆನ್ನವೀರನಹಳ್ಳಿಯಲ್ಲಿ 7.5 ಕೆಜಿ ಗಾಂಜಾ ಜಪ್ತಿ ಮಾಡಿ ಮಾಲೀಕ ಕೃಷ್ಣಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಗ್ರಾಮೀಣ ಪ್ರದೇಶಗಳಲ್ಲಿ ರಾಗಿ ಮತ್ತಿತರ ಬೆಳೆಗಳ ಜತೆ ಗಾಂಜಾ ನಾಟಿ ಮಾಡುವಂತೆ ಕೆಲವರು ಪ್ರೇರೇಪಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿದೆ, ರೈತರು ಹಾಗೂ ದಂಧೆಕೋರರ ನಡುವೆ ಮಧ್ಯವರ್ತಿಗಳಾಗಿ ಯಾರು ಕೃತ್ಯ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ದಂಧೆಕೋರರ ಬಂಧನಕ್ಕೆ ಕಾರ್ಯಾಚರಣೆ ರೂಪಿಸಲಾಗಿದೆ ಹಾಗೆಯೇ ರೈತರಿಗೂ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.

ಸಾಧಿಕ್‌ಪಾಷಾ, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net