

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರ ಜೀವನ, ಕೊಡುಗೆ, ಹೋರಾಟ ಒಳಗೊಂಡ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ತಾಲೂಕು ಬೊಮ್ಮವಾರ ಗ್ರಾಮದ ಗಾಂಧಿ ಭವನದಲ್ಲಿ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದೂರ್ ಶಾಸ್ತ್ರಿಜೀ ಜಯಂತಿಯಲ್ಲಿ ಮಾತನಾಡಿದರು. ಅಹಿಂಸಾವಾದಿಯಾಗಿದ್ದ ಬಾಪೂಜಿ ಸಹಬಾಳ್ವೆ, ಸಮಾನತೆ, ಸತ್ಯ, ಧರ್ಮ, ಸಹಿಷ್ಣುತೆ, ಪ್ರೀತಿ ವಾತ್ಸಲ್ಯ, ಭಾತೃತ್ವಕ್ಕೆ ಪ್ರಾಮುಖ್ಯತೆ ನೀಡಿದ್ದರು. ನಮ್ಮ ಅಜ್ಜನವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂದು ಸಚಿವರು ನೆನಪಿಸಿಕೊಂಡರು. ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಅಹಿಂಸಾ ನೀತಿ ಅನುಸರಿಸಿ, ವಿವಿಧ ಚಳವಳಿಗಳನ್ನು ಆರಂಭಿಸುತ್ತಾರೆ. 1942ರ ಭಾರತ ಬಿಟ್ಟು ತೋಲಗಿ ಚಳುವಳಿ ತೀವ್ರ ಪರಿಣಾಮಕಾರಿಯಾಗಿ ಇಡೀ ದೇಶಾದ್ಯಂತ ವ್ಯಾಪಿಸಿ, ಜನರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು ಎಂದರು.
ಆದರ್ಶಗಳನ್ನು ಪಾಲಿಸಬೇಕು: ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಶಿಕ್ಷಕರು ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜತೆಗೆ ನಮ್ಮ ದೇಶಕ್ಕೆ ಹೋರಾಡಿದ ಮಹನೀಯರ ಜೀವನ ಚರಿತ್ರೆ, ಆದರ್ಶಗಳನ್ನು ಪಾಲಿಸಬೇಕು ಎಂದು ಸಚಿವರು ಕರೆ ನೀಡಿದರು. ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸರಳತೆ, ಸಜ್ಜನಿಕೆ ವ್ಯಕ್ತಿತ್ವವನ್ನು ಇಂದಿನ ಮಕ್ಕಳು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು. ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಣ್ಣ ಹಾಗೂ ಗುಡಿ ಕೈಗಾರಿಕೆಗಳು, ಕುಲಕಸುಬು ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಪ್ರತಿ ದಿನವೂ ಸ್ಮರಿಸಬೇಕು: ರಾಷ್ಟ್ರಪಿತ ಗಾಂಧೀಜಿ, ಶಾಸ್ತ್ರಿಜೀ ಅವರ ಜಯಂತಿ ಹಾಗೂ ಪುಣ್ಯಸ್ಮರಣೆ ದಿನದಂದು ಮಾತ್ರ ನೆನಪಿಸಿಕೊಂಡರೆ ಸಾಲದು, ಅವರ ಕೊಡುಗೆಯನ್ನು ಪ್ರತಿ ದಿನವೂ ಸ್ಮರಿಸಿಕೊಳ್ಳಬೇಕಿದೆ ಎಂದುಜಿಲ್ಲಾಧಿಕಾರಿ ಎ.ಬಿ ಬಸವರಾಜು ಹೇಳಿದರು. ಯುವ ಪೀಳಿಗೆ ಬಾಪೂಜಿ ಹಾಗೂ ಶಾಸ್ತ್ರಿಜೀ ಜೀವನಾದರ್ಶ, ತತ್ವಗಳು ಹಾಗೂ ಸಾಮಾಜಿಕ ಕೊಡುಗೆಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀ ಆರಂಭಿಸಿದ ಖಾದಿ ಕೇಂದ್ರ ಹಾಗೂ ಗುಡಿ ಕೈಗಾರಿಕೆಗಳನ್ನು ಬೆಳೆಸಬೇಕು. ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಜಯಂತಿ ಹಾಗೂ ಆಚರಣೆಗಳು ಹೆಚ್ಚಾಗಿ ನಡೆಸಿ, ಯುವ ಜನತೆಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮಹಾನ್ ಶಾಂತಿದೂತರಾಗಿದ್ದರು: ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ಕೃಷ್ಣಪ್ಪ ಮಾತನಾಡಿ, ಗಾಂಧೀಜಿ ಮೇರು ವ್ಯಕ್ತಿತ್ವ ಹೊಂದಿದ್ದು, ಮಹಾನ್ ಶಾಂತಿದೂತರಾಗಿದ್ದರು ಎಂದು ಸ್ಮರಿಸಿದರು. ಗಾಂಧಿ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಆಚರಿಸಲಾಗುತ್ತದೆ. ಸತ್ಯ-ಅಹಿಂಸೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮರ ತತ್ವಾರ್ದಶಗಳು ಯುವಕರಿಗೆ ಪರಿಚಯಿಸುವ ಕಾರ್ಯವಾಗಬೇಕು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸೀ ಸರಳ ವ್ಯಕ್ತಿತ್ವ ಹಾಗೂ ಪ್ರಾಮಾಣಿಕತೆಯಿಂದ ಕೂಡಿದ ಜನನಾಯಕರಾಗಿ ದೇಶದ ಆಡಳಿತ ನಡೆಸಿದರು ಎಂದರು.