ಎಲ್ಲವನ್ನು ನಾನೇ ಮಾಡಿದೆ ಎಂದು ನಾನು ಹೇಳಿಕೊಳ್ಳುವುದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಜಿಟಿಡಿ

GTD
Published on


ಮೈಸೂರು: ಯಾವುದೇ ಜನಪ್ರತಿನಿಧಿ ಅಭಿವೃದ್ಧಿ ಕಾರ್ಯ ಮಾಡಿದರೆ ಅದನ್ನು ನಾನು ಮುಕ್ತ ಕಂಠದಿಂದ ಶ್ಲಾಘಿಸುವ ಏಕೈಕ ವ್ಯಕ್ತಿ ನಾನು. ಬೇರೆ ಯವರ ರೀತಿಯಲ್ಲಿ ಎಲ್ಲವನ್ನು ನಾನೇ ಮಾಡಿದೆ ಎಂದು ಹೇಳಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಕೆಲಸ ಮಾಡಿಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಮಂಡಕಳ್ಳಿ ಆಶ್ರಯ ಯೋಜನೆ ಅನುಷ್ಠಾನದಲ್ಲಿ ಸಿದ್ದರಾಮಯ್ಯ ಅವರ ಪರಿಶ್ರಮ ಇದೆ ಎಂದು ನಾನು ಅಭಿನಂದನೆ ಸಲ್ಲಿಸಿದ್ದೇನೆ. ಯಾರೇ ಅಭಿವೃದ್ಧಿ ಕಾರ್ಯ ಮಾಡಿದರೂ ಸಹ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರ ಕಾಲದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿದ್ದರಾಮಯ್ಯ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಅವರ ಜತೆ ನಾನು ಸಹ 25 ವರ್ಷ ಇದ್ದೆ. ಅವರೊಂ ದಿಗೆ ಅಭಿವೃದ್ಧಿ ಕಾರ್ಯದಲ್ಲಿ ನಾನು ಸಹ ಕೈ ಜೋಡಿಸಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಅವರಿಗೆ ಇಂದಿಗೂ ಕಾಳಜಿ ಇದೆ. ಹಾಗಾಗಿ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂಬ ಕಳಕಳಿ ಹೊಂದಿದ್ದಾರೆ. ಸಿದ್ದರಾಮಯ್ಯ 15 ವರ್ಷ ಕಾಲ ಹಣಕಾಸು ಸಚಿವರಾಗಿದ್ದರು, 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಸರಿಸಮಾನವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ನನ್ನಿಂದ ಸಾಧ್ಯವೇ? ನಾನು ಕೇವಲ ಶಾಸಕನಷ್ಟೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಇಷ್ಟೆಲ್ಲ ಅಭಿವೃದ್ಧಿ ಮಾಡಿದೆ, ಆದರೆ ನನ್ನ ನಿರೀಕ್ಷೆಗೆ ತಕ್ಕಷ್ಟು ಈಗ ಅಭಿವೃದ್ಧಿ ಕಾರ್ಯ ಆಗಿಲ್ಲವಲ್ಲ ಎಂಬ ನೋವು ಸಿದ್ದರಾಮಯ್ಯ ಅವರಿಗೆ ಇರಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net