ಮಾ.14 ರಂದು ಜಿ.ಎಸ್.ಟಿ.ಜಾಗೃತಿ ಕಾರ್ಯಾಗಾರ

Contractor association press meet
Published on

ಕಾರವಾರ: ಜಿ.ಎಸ್.ಟಿ. ಬಗ್ಗೆ ಪಾವತಿದಾರರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಮಾ.14 ರಂದು ಬೆಳಗ್ಗೆ 11 ಗಂಟೆಗೆ ಕೆ.ಎಚ್. ಬಿ. ಕಾಲನಿಯ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಕಾರವಾರ ತಾಲೂಕು ನೋಂದಾಯಿತ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಎಸ್.ಟಿ. ಕಾಯ್ದೆಯಲ್ಲಿ ಹಲವು ಗೊಂದಲಗಳಿವೆ. ವಾಣಿಜ್ಯ ತೆರಿಗೆ ಪಾವತಿ ಸಂಬಂಧದ ಐದಾರು ವರ್ಷದ ಹಿಂದಿನ ಬಾಕಿಗಳನ್ನು ಇಟ್ಟು ನೋಟಿಸ್ ನೀಡಲಾಗುತ್ತಿದೆ. ಜಿ.ಎಸ್.ಟಿ. ಅಧಿಕಾರಿಗಳ ಕಿರುಕುಳದಿಂದಲೇ ಅಂಕೋಲಾದ ಗುತ್ತಿಗೆದಾರ ಬಾಲಚಂದ್ರ ನಾಯಕ ಆತ್ಮಹತ್ಯೆ ಮಾಡಿಕೊಂಡರು. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವರ್ತನೆ ಖಂಡಿಸಿ, ಎರಡು ವಾರಗಳ ಹಿಂದೆ ಕಾರವಾರ ವಾಣಿಜ್ಯ ತೆರಿಗೆ ಅಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗಿತ್ತು. ಪರಿಣಾಮ ವಾಣಿಜ್ಯ ತೆರಿಗೆ ಇಲಾಖೆ ಧಾರವಾಡ ವಿಭಾಗದ ಜಂಟಿ ಆಯುಕ್ತ ನಾಗರಾಜ ರಾವ್ ಅವರು ಆಗಮಿಸಿ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ.‌
ಈ ಹಿನ್ನೆಲೆಯಲ್ಲಿ ಕಾರವಾರದ ವ್ಯಾಪಾರಸ್ಥರು , ತೆರಿಗೆ ಸಲಹೆಗಾರರು ಆಗಮಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಪ್ರೀತಂ ಮಾಸೂರಕರ್ ಮಾತನಾಡಿ, ಜಿ.ಎಸ್.ಟಿ. ವೆಬ್ ಸೈಟ್ ಬಳಕೆದಾರರ ಸ್ನೇಹಿಯಾಗಿಲ್ಲ.‌ ಜಿ.ಎಸ್.ಟಿ. ಗೊಂದಲಗಳಿಗೆ ತೆರಿಗೆ ಸಲಹೆಗಾರರ ಬಳಿಯೂ ಉತ್ತರವಿಲ್ಲ.‌ ಕಾಯ್ದೆ ಜಾರಿಯಾಗಿ 6 ವರ್ಷವಾದರೂ ಅಧಿಕಾರಿಗಳು ಜಿ.ಎಸ್.ಟಿ. ಪಾವತಿದಾರರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿಲ್ಲ.‌ ಅಧಿಕಾರಿಗಳಿಗೂ ಸಮರ್ಪಕ ಕಾನೂನಿನ ಜ್ಞಾನವಿಲ್ಲ. ಜಿ.ಎಸ್.ಟಿ.ಕಾಯ್ದೆಯ ಸಂಬಂಧ ಹಲವು ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶಗಳಾಗಿವೆ. ಆದರೆ, ಸ್ಥಳೀಯ ಅಧಿಕಾರಿಗಳಿಗೆ ಅವುಗಳ ಜ್ಞಾನವೇ ಇಲ್ಲ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡುವ ನೋಟಿಸ್ ನಿರ್ಲಕ್ಷಿಸಿದರೆ, ಯಾವುದೇ ಮುನ್ಸೂಚನೆ ನೀಡದೇ ಪಾವತಿದಾರರ ಖಾತೆಯನ್ನು ಅಮಾನತು ಮಾಡಲಾಗುತ್ತದೆ. ಆಸ್ತಿ ಜಪ್ತು ಮಾಡಲಾಗುತ್ತದೆ. ಬಂಧನ ಮಾಡುವ ಅಧಿಕಾರವೂ ಅಧಿಕಾರಗಳಿವೆ.
ಜಿ.ಎಸ್.ಟಿ.ಪಾವತಿದಾರರಿಗೆ ಇರುವ ಗೊಂದಲ‌ ಬಗೆಹರಿಸಬೇಕು. ಕಾಯ್ದೆಯನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.
ರೋಹಿದಾಸ ಕೊಠಾರಕರ್, ಅಶೋಕ ಮಾಳ್ಸೇಕರ್, ರಾಜೇಂದ್ರ ಅಂಚೆಕರ್, ವಿಜಯ ಬಿಲಿಯೇ, ನಿತಿನ್ ಕೊಳಂಬಕರ್, ಭೋಜರಾಜ್, ರೂಪೇಶ ನಾಯ್ಕ, ಸೋಮನಾಥ, ರಾಜೇಶ ಶೇಟ್, ಸತೀಶ ನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net