250 ಅರ್ಹರಿಗೆ ಜಿ ಪ್ಲಸ್ 2 ಮಾದರಿ ಮನೆ

Slum board Meeting
Published on

ಮುಂಡಗೋಡ: ಕೊಳಚೆ ನಿಮೂಲನಾ ಮಂಡಳಿ ವತಿಯಿಂದ ಮೊದಲ ಹಂತದಲ್ಲಿ 250 ಅರ್ಹ ಫಲಾನುಭವಿಗಳಿಗೆ ಜಿ ಪ್ಲಸ್ 2 ಮಾದರಿಯ ಮನೆಗಳನ್ನು 2024ರ ಮಾರ್ಚ್​ನಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅವರ ಹೆಸರಿಗೆ ನೋಂದಣಿ ಮಾಡಿಸಿ ಕೊಡಲಾಗುವುದು ಎಂದು ಕೊಳಚೆ ನಿಮೂಲನಾ ಮಂಡಳಿ ಸಹಾಯಕ ಇಂಜಿನಿಯರ್ ಶಂಭುಲಿಂಗ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಭವವನದಲ್ಲಿ ಜಿ ಪ್ಲಸ್ 2 ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಆಯೋಜಿಸಿದ್ದ ಕೊಳಚೆ ನಿಮೂಲನಾ ಮಂಡಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಸದಸ್ಯರ ಸಭೆಯಲ್ಲಿ ಅವರು ಭರವಸೆ ನೀಡಿದರು. ಕೊಳಚೆ ನಿಮೂಲನಾ ಮಂಡಳಿಯಿಂದ ಪಟ್ಟಣದ ಹೆಬ್ಬಾರನಗರದಲ್ಲಿ ಜಿ ಪ್ಲಸ್ 2 ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಈ ಹಿಂದೆ 908 ಮನೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಇದರಲ್ಲಿ 250 ಜನರು ಅರ್ಜಿ ಸಲ್ಲಿಸಿ ಡಿ.ಡಿ. ಹಣ ತುಂಬಿದ್ದಾರೆ. ಈ ಫಲಾನುಭವಿಗಳಿಗೆ ಮಾರ್ಚ್​ನಲ್ಲಿ ಮನೆಯನ್ನು ಹಸ್ತಾಂತರಿಸಲಾಗುವುದು. ಉಳಿದ ಮನೆಗಳಿಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸುವಂತೆ ಪತ್ರಿಕೆ ಹಾಗೂ ನಮ್ಮ ಸಿಬ್ಬಂದಿಯಿಂದ ಜನರಿಗೆ ತಿಳಿ ಹೇಳಲಾಗುತ್ತಿದೆ. ಆದರೆ, ಜನರು ಆಸಕ್ತಿ ತೋರುತ್ತಿಲ್ಲ. ಪಪಂ ಸದಸ್ಯರು ತಮ್ಮ ವಾರ್ಡ್​ಗಳಲ್ಲಿ ಮನೆ ಇಲ್ಲದವರಿಗೆ ತಿಳಿ ಹೇಳಿ ಅರ್ಜಿ ಹಾಕಿಸುವ ಕೆಲಸ ಮಾಡಬೇಕು. 2024ರ ಡಿಸೆಂಬರ್ ತಿಂಗಳಿನಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು. ಇದು ಸರ್ಕಾರದ ಆದೇಶವಾಗಿದೆ ಎಂದರು.

ಒಂದು ಮನೆಯ ವೆಚ್ಚ 7.70 ಲಕ ್ಷೂ.ಗಳಿದ್ದು, ಎಸ್ಸಿ-ಎಸ್ಟಿ ಫಲಾನುಭವಿಗಳು ಶೇ. 10 ಇತರ ಶೇ.15 ಡಿಡಿ ಹಣ ತುಂಬಬೇಕು. ನಂತರ ಅವರಿಗೆ ಬ್ಯಾಂಕ್ ಸಾಲ ಬೇಡವೆಂದರೆ ಉಳಿದ ಮೊತ್ತವನ್ನು ಮನೆ ಹಸ್ತಾಂತರ ವೇಳೆ ನೀಡಬೇಕಾಗುತ್ತದೆ. ಬ್ಯಾಂಕಿನ ಸಾಲ ಬೇಕಾದರೆ ನಾವು ಕೇಳಿದ ದಾಖಲೆ ನೀಡಬೇಕು ಎಂದರು.

ಈ ಹಿಂದೆ ನೀವು ಪಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆದರೂ ಜನರಿಗೆ ತಿಳಿ ಹೇಳಿ ಅರ್ಜಿಗಳನ್ನು ಹಾಕಿಸಲಾಗಿತ್ತು ಎಂದು ಸದಸ್ಯ ಫಣಿರಾಜ ಹದಳಗಿ, ಸ್ಲಂ ಬೋರ್ಡ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ವಿವಿಧ ಸದಸ್ಯರು ಹಾಗೂ ಸ್ಲಂ ಬೋರ್ಡ್​ನ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ನಕಾಶೆ ಇಲ್ಲದೆ ಮತ್ತು ನಮಗೆ ತಿಳಿಯದೆ ಹಾಗೆ ಸರ್ವೆ ಮಾಡಿ ಹಕ್ಕುಪತ್ರ ನೀಡಿದ್ದಿರಿ ಹಾಗೆ ಹಕ್ಕುಪತ್ರ ನೀಡಲು ಹೇಗೆ ಬರುತ್ತದೆ ಎಂದು ಕೆಲ ಸದಸ್ಯರು ಪ್ರಶ್ನಿಸಿದರು.

ನಂತರ ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಸ್ಲಂ ಬೋರ್ಡ್​ನವರು ಈ ಹಿಂದೆ ನೀವೆ ನೀಡಿದ ನಕಾಶೆ ಮತ್ತೆ ಒಂದು ನಕಲು ನಿಮಗೆ ನೀಡುತ್ತೇವೆ. ಒಟ್ಟಿನಲ್ಲಿ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಸ್ಲಂ ಬೋರ್ಡ್ ಇಂಜಿನಿಯರ್ ಪ್ರತೀಕ ದಳವಾಯಿ, ಪಪಂ ಇಂಜಿನಿಯರ್ ಶಂಕರ ದಂಡಿನ ಮತ್ತು ಪಪಟ್ಟಣ ಪಂಚಾಯಿತಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net