ತಾಲಿಬಾನ್​ ವಾಗ್ವಾದಕ್ಕೆ ಜಿ.ಪರಮೇಶ್ವರ ಅಸಮಾಧಾನ; ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಹೇಳಿದ್ದೇನು?

parmeshwar
Published on

ತುಮಕೂರು: ಕಾಂಗ್ರೆಸ್-ಬಿಜೆಪಿ ನಡುವಿನ 'ತಾಲಿಬಾನ್' ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಎರಡೂ ಪಕ್ಷದವರ ಕೆಸರೆರಚಾಟ ಸರಿಯಲ್ಲ ಎಂದಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೀಳು ಮಾತುಗಳು, ಕೀಳು ರಾಜಕಾರಣ ಆಗಬಾರದು. ನಾವು ಜನಪ್ರತಿನಿಧಿಗಳು, ಅದನ್ನು ಮೊದಲು ಅರ್ಥಮಾಡಿಕೊಂಡು ಹೇಳಿಕೆ ಕೊಡಬೇಕು ಎಂದರು.

ನಾವು ಜನರನ್ನು ಪ್ರತಿನಿಧಿಸ್ತೇವೆ. ಜನಪ್ರತಿನಿಧಿಗಳು ಸಂಯಮ-ನಿಷ್ಠೆಯಿಂದ ಇರಬೇಕು ಎಂದು ಜನರು ಬಯಸುತ್ತಾರೆ. ಸಾರ್ವಜನಿಕವಾಗಿ ಅವಹೇಳನಕಾರಿಯಾದ ಮಾತನ್ನು ಒಬ್ಬರಿಗೆ ಒಬ್ಬರು ಆಡಿಕೊಳ್ಳುವುದು ಸರಿಯಲ್ಲ. ಎರಡೂ ಪಕ್ಷದವರ ಕೆಸರೆರಚಾಟ ಸರಿಯಲ್ಲ ಎಂದರು. ಭಾರತದಲ್ಲೂ ತಾಲಿಬಾನಿಗಳು, ಭಯೋತ್ಪಾದಕರು ಇದ್ರೆ ನಮ್ಮ ಸೈನ್ಯ ನೋಡಿಕೊಳ್ಳುತ್ತದೆ. ಗಡಿಯಲ್ಲಿ ಭಯೋತ್ಪಾದಕರು, ತಾಲಿಬಾನಿಗಳು ನುಗ್ಗಿದರೆ ನಮ್ಮ ಸೈನ್ಯ ಅಂಥವರನ್ನು ಹೊಡೆದುಹಾಕುತ್ತದೆ ಎಂದರು.

ಪಂಜಾಬಲ್ಲಿ ದಲಿತ ನಾಯಕರನ್ನು ಸಿಎಂ ಮಾಡಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, "ಹೌದು, ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ, ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳುವಂತದ್ದಾಗಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ. ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ 3 ಜನ ಮುಖ್ಯಮಂತ್ರಿಗಳು ಆದರೂ ಆಶ್ಚರ್ಯ ಪಡಬೇಕಂತಿಲ್ಲ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net