

ಚಿಕ್ಕಮಗಳೂರು: ಒಬ್ಬರನ್ನೊಬ್ಬರು ದೂರಲಾರರು, ಆದರೆ ಅಣ್ಣನಿಗೆ ತಮ್ಮನ ಸ್ಪರ್ಧೆ ಕಾಟ, ತಮ್ಮನಿಗೆ ಅಣ್ಣನ ಸ್ಪರ್ಧೆ ಕಾಟ. ಊರು ಮನೆ ಒಳಗೆ ಜನರ ಕಿತ್ತಾಟ. ಇಬ್ಬರು ಸ್ನೇಹಿತರೆ, ಸಂಜೆಯಾಯಿತೆಂದರೆ ಗ್ಲಾಸ್ ಮಾತ್ರ ಎರಡು. ಕ್ವಾಟ್ರು ಮಾತ್ರ ಒಂದೇ. ಗೆಳೆಯನಿಗಾಗಿ ಕಣದಿಂದ ಹಿಂದೆ ಸರಿಯೋಣವೆಂದರೆ ಬೆಂಬಲಿಗರು ಬಿಡುತ್ತಿಲ್ಲ. ಇಂತಹ ಉಭಯ ಸಂಕಟದ ಪರಿಸ್ಥಿತಿ ಸೃಷ್ಟಿಸಿರುವುದು ಗ್ರಾಪಂ ಚುನಾವಣೆ.
ಜಿಲ್ಲೆಯಲ್ಲಿ ಬೇರೆ ಬೇರೆ ಪಕ್ಷಗಳ ಬೆಂಬಲಿತರಾಗಿ ಅಣ್ಣ, ತಮ್ಮ, ಓರಗಿತ್ತಿಯರು ಚುನಾವಣಾ ಕಣಕ್ಕಿಳಿದಿದ್ದಾರೆ. ಅವರ ಸಂಬಂಧಿಗಳು, ಸ್ನೇಹಿತರು, ಹಿತೈಷಿಗಳು ಒಂದೆಡೆ ಹಲವರ ನಿಷ್ಠುರ, ಅಸಮಾಧಾನ ಕಟ್ಟಿಕೊಳ್ಳುವ, ಸಂಬಂಧ ಹಳಸುವ ಆತಂಕದಲ್ಲಿದ್ದಾರೆ.
ರಾಜಕೀಯ ಪಕ್ಷಗಳ ಹೆಸರಿಲ್ಲದೆ ಸ್ಪರ್ಧೆಗೆ ಇಳಿದಿದ್ದರೂ ಆಯಾ ಪಕ್ಷದ ನೆರಳು ಅವರ ಬೆನ್ನು ಬಿಡುವುದಿಲ್ಲ. ವರ್ಷವಿಡೀ ಒಂದು ನಿಶ್ಚಿತ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆ ಆತನಿಗೆ ಇರುವುದರಿಂದ ಪಕ್ಷೇತರನಾಗಿದ್ದರೂ ಆತ ಆ ರಾಜಕೀಯ ಪಕ್ಷದವನೆಂದೇ ಜನ ಗುರುತಿಸುತ್ತಾರೆ ಎನ್ನುವುದು ಗಮನಾರ್ಹ.
ಅಭ್ಯರ್ಥಿಗಳ ಸಂಬಂಧಿಕರು, ಸ್ನೇಹಿತರಾಗಿರುವವರಿಗೆ ಉಭಯ ಸಂಕಟ. ಯಾರನ್ನು ಬೆಂಬಲಿಸುವುದು. ಯಾರನ್ನು ಆರಿಸುವುದು ಎನ್ನುವ ಚಿಂತೆ. ಇನ್ನೊಂದು ಪ್ರಕರಣದಲ್ಲಿ ಒಬ್ಬನ ಆಪ್ತ ಸ್ನೇಹಿತ ಕಣಕ್ಕಿಳಿದಿದ್ದು, ಆತನನ್ನು ಬೆಂಬಲಿಸಿ ಪ್ರಚಾರದಲ್ಲಿ ಭಾಗಿಯಾಗೋಣವೆಂದರೆ ಆ ಅಭ್ಯರ್ಥಿಯ ಎದುರಾಳಿ ಈತನ ಆಪ್ತ ಸಂಬಂಧಿ. ಸ್ನೇಹಿತನನ್ನು ಬೆಂಬಲಿಸದಿದ್ದರೂ ಸಂಬಂಧಿಯನ್ನು ಬೆಂಬಲಿಸುವಂತೆ ಕುಟುಂಬದವರಿಂದಲೇ ಒತ್ತಡ. ಈಗ ಈ ವ್ಯಕ್ತಿ ಮೌನಕ್ಕೆ ಶರಣಾಗಿದ್ದಾರೆ. ಅತ್ತಿಗೆ-ನಾದಿನಿಯರ ಸ್ಪರ್ಧೆಯೂ ಈ ಬಾರಿ ಇಲ್ಲದಿಲ್ಲ. ಸಂಬಂಧಿಕರು ಯಾರ ಪರ ಪ್ರಚಾರ ನಡೆಸುವುದು? ಯಾರನ್ನು ಬೆಂಬಲಿಸುವುದು ? ಎನ್ನುವ ಸಮಸ್ಯೆ ಎದುರಾಗಿರುವ ನಿದರ್ಶನವೂ ಇದೆ. ಎಲ್ಲದರಲ್ಲೂ ಒಳಗೊಳಗೇ ಶೀತಲ ಸಮರ. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹಳ್ಳಿ ರಾಜಕಾರಣದ ಹೈಲೈಟ್ಸ್ ಇದು. ಊರೂರಲ್ಲಿ ಇಂತಹ ನಿದರ್ಶನಗಳು ಕಂಡು ಬರುತ್ತಿವೆ.
ಬಂಡಾಯವಿದೆ-ತಲೆನೋವಿಲ್ಲ:
ಯಾವ ರಾಜಕೀಯ ಪಕ್ಷವೂ ಬಂಡಾಯದಿಂದ ಹೊರತಾಗಿಲ್ಲ. ಪಕ್ಷದ ಚಿಹ್ನೆ ಇಲ್ಲದಿದ್ದರಿಂದ ಮೇಲ್ನೋಟಕ್ಕೆ ಎಲ್ಲರೂ ಪಕ್ಷೇತರರೆ. ಆದರೂ ಎಲ್ಲರೂ ರಾಜಕೀಯ ಪಕ್ಷದವರೆ. ತಮ್ಮ ಪಕ್ಷದ ಇಬ್ಬರು, ಮೂವರು ಕಣಕ್ಕಿಳಿದಿರುವುದರಿಂದ ಮನವೊಲಿಸಲು ರಾಜಕೀಯ ಪಕ್ಷಗಳೇ ಪ್ರಯತ್ನ ನಡೆಸಿವೆ. ಒಂದೇ ಪಕ್ಷದ ಇಬ್ಬಿಬ್ಬರು, ಮೂವರು ಚುನಾವಣಾ ಕಣಕ್ಕಿಳಿದು ಹಿಂದೆಂದೂ ಇಲ್ಲದ ಉತ್ಸಾಹವನ್ನು ಈ ಬಾರಿ ಪ್ರದರ್ಶಿಸುತ್ತಿದ್ದಾರೆ. ಜತೆಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಾಗೆಯೇ ಹಿಂದುಳಿದ ವರ್ಗದವರಲ್ಲಿ ಸಹ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಈ ತೆರನಾದ ಸ್ಪರ್ಧೆಯ ನಿದರ್ಶನ ಸಹ ಸಾಕಷ್ಟಿವೆ.
ಅನೇಕ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗದೆ ರಾಜಕೀಯ ಪಕ್ಷಗಳೇ ಈ ಅಭ್ಯರ್ಥಿಗಳ ಮುಂದೆ ಸೋತು ಶರಣಾಗಿದ್ದಾರೆ. ಕೊನೆಗೆ ನಿಮ್ಮಲ್ಲಿ ಯಾರೂ ಗೆಲ್ಲುತ್ತೀರೋ ಗೊತ್ತಿಲ್ಲ. ನಿಮ್ಮಿಬ್ಬರನ್ನೂ ಬಿಡುವಂತಿಲ್ಲ. ಹಾಗಾಗಿ ನಿಮ್ಮಲ್ಲಿ ಯಾರು ಗೆಲ್ಲುತ್ತೀರೋ ಅವರು ನಮ್ಮ ಪಕ್ಷದ ಬೆಂಬಲಿತರು ಎಂದು ಗುರುತಿಸುವುದಾಗಿ ಹೇಳಿರುವ ರಾಜಕೀಯ ಪಕ್ಷಗಳ ಮುಖಂಡರು ಕೈಚೆಲ್ಲಿ ಕುಳಿತಿದ್ದಾರೆ.
ಮತ ಬಿಕರಿಗೆ ವೇದಿಕೆ ಸಜ್ಜು:
ಕೆಲವು ಅಭ್ಯರ್ಥಿಗಳು ಏಕಾಂಗಿಯಾಗಿಯೇ ಮನೆ ಮನೆ ಪ್ರಚಾರ ನಡೆಸುತ್ತಿದ್ದರೆ, ಇನ್ನು ಕೆಲವರು ಭರ್ಜರಿಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಮತ ಯಾಚಿಸಲು ತೆರಳುವ ಬೆಂಬಲಿಗರ ಖರ್ಚು ನಿರೀಕ್ಷೆಗೂ ಮೀರಿದ್ದು. ಜತೆಗೆ ಬಹುತೇಕ ಅಭ್ಯರ್ಥಿಗಳಿಗೆ ಹಣ, ಹೆಂಡ ಹಂಚುವ ಅನಿವಾರ್ಯತೆಯೂ ಇದೆ. ಎದುರಾಳಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಎಷ್ಟು ಹಣ ಹಂಚುತ್ತಾರೆ ಎನ್ನುವುದನ್ನು ಪರಸ್ಪರರು ಕಾಯುತ್ತಿದ್ದಾರೆ. ಒಬ್ಬರು ಹಂಚಿದ್ದನ್ನು ಗಮನಿಸಿ ಇನ್ನೊಬ್ಬರು ಹಣ ಹಂಚಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ ಈ ಬಾರಿ ಎರಡು, ಮೂರರಿಂದ ಐದು ಸಾವಿರದವರೆಗೂ ಮತ ಬಿಕರಿಯಾಗಬಹುದೆಂದು ಹೇಳುವ ಕೆಲವು ಹಿರಿಯ ರಾಜಕಾರಣಿಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಬಲ್ಯದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ.
ಊರಿನ ಕೆಲಸ ಮಾಡದಿದ್ದರೂ ಮರು ಆಯ್ಕೆ:
ಊರಿನ ಕೆಲಸ ಮಾಡದೆ ಕೆಲವು ಅಭ್ಯರ್ಥಿಗಳು ಪ್ರತಿ ಬಾರಿ ಗೆಲ್ಲುತ್ತಿದ್ದಾರೆ. ಆದರೆ ಈ ಅಭ್ಯರ್ಥಿಗಳು ಮನೆ ಮನೆಯ ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಜಾತಿ ದೃಢೀಕರಣ, ಖಾತೆ ವರ್ಗಾವಣೆ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಿಂದ ಸೌಲಭ್ಯ ಕೊಡಿಸುವುದು, ತೋಟಗಾರಿಕೆ, ಕೃಷಿ ಇಲಾಖೆಗಳಿಂದ ಸೌಲಭ್ಯ ಕೊಡಿಸುವುದು, ಅರ್ಜಿ ಬರೆಯುವುದರಿಂದ ಹಿಡಿದು ಅಧಿಕಾರಿಗಳ ಜತೆ ವ್ಯವಹರಿಸುವವರೆಗೂ ಇವರ ಏಕಪಾತ್ರಾಭಿನಯ ಈ ಚುನಾವಣೆಯಲ್ಲಿ ಶ್ರೀರಕ್ಷೆಯಾಗಿದೆ. ಅಚ್ಚರಿಯ ಸಂಗತಿ ಎಂದರೆ ಇವರ ಬೆಂಬಲಿಗರು ಯಾರೂ ಹಣದ ಅಪೇಕ್ಷೆ ಇಲ್ಲದೆ ಮತ ಯಾಚನೆಯ ಕಾಯಕದಲ್ಲಿ ತೊಡಗಿದ್ದಾರೆ. ಅದಕ್ಕೂ ಹೆಚ್ಚಾಗಿ ಅವರ ಜಾತ್ಯಸ್ಥರು ಯಾರೂ ಹಣದ ನಿರೀಕ್ಷೆ ಮಾಡುವುದಿಲ್ಲ. ಇವರಿಂದ ವೈಯಕ್ತಿಕ ಕೆಲಸ ಮಾಡಿಕೊಂಡವರೂ ಹಣ ಯಾಚಿಸುವುದಿಲ್ಲ. ಇಂತಹ ಸೋಜಿಗದ ನಿದರ್ಶನಗಳು ಕೂಡ ಈ ಜಿಲ್ಲೆಯಲ್ಲಿವೆ. ವಿಶೇಷವೆಂದರೆ ಇಂಥವರು ಆಯಾ ಗ್ರಾಮದಲ್ಲಿ ಕಳೆದ ಹಲವು ಚುನಾವಣೆಗಳಿಂದಲೂ ಸೋಲಿಲ್ಲದ ಸರದಾರರು.
ಜನರ ಬೇಡಿಕೆಗಳು ಈಗ ಮೊದಲಿನಂತಿಲ್ಲ:
ಮೊದ ಮೊದಲು ಚುನಾವಣೆಗಳು ನಡೆಯುತ್ತಿದ್ದಾಗ ರಾಜಕಾರಣಿಗಳ ಭರವಸೆಗಳಿಗೆ ಬೆರಗಾಗಿ ಜನರು ಮತ ಚಲಾಯಿಸುತ್ತಿದ್ದರು. ವರ್ಷ ಕಳೆದಂತೆ ಮತ ಕೇಳಲು ಅತ್ಯಂತ ವಿನಮ್ರತೆಯಿಂದ ಬರುತ್ತಿದ್ದ ರಾಜಕಾರಣಿಗಳನ್ನು ಜನರು ಊರಿನ ಕೆಲಸಗಳು ಆಗಿಲ್ಲ, ನಮ್ಮೂರಿನ ದೇವಾಲಯಕ್ಕೆ ಹಣ ಕೊಟ್ಟಿಲ್ಲವೆಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈಗ ಆ ರೀತಿ ಇಲ್ಲ. ನೀವೆಷ್ಟು ಹಣ ಕೊಡುತ್ತೀರಿ ಎನ್ನುವ ಬೇಡಿಕೆಗಷ್ಟೇ ಸೀಮಿತರಾಗಿ ಇಡೀ ಕುಟುಂಬಕ್ಕೆ ಅದೊಂದು ವರಮಾನ ಎನ್ನುವ ಭಾವನೆಗೆ ಒಳಗಾಗುತ್ತಿದ್ದಾರೆ ಅನೇಕ ಮತದಾರರು ಎಂದು ಹಿರಿಯ ರಾಜಕಾರಣಿಗಳು ವಿಶ್ಲೇಷಿಸುತ್ತಿದ್ದಾರೆ.
ಪ್ರಾಮಾಣಿಕ ರೂ ಇದ್ದಾರೆ:
ಇವುಗಳಿಗೆಲ್ಲ ಅಪವಾದವೆಂಬಂತೆ ಇಂದಿಗೂ ಹಣ ಪಡೆಯದೆ, ಯಾರ ಮರ್ಜಿಗೂ, ಆಮಿಷಕ್ಕೂ ಒಳಗಾಗದೆ ಮತ ಚಲಾಯಿಸುವ ಅಸಂಖ್ಯಾತ ಪ್ರಾಮಾಣಿಕ ಮತದಾರ ಬಳಗವಿದೆ. ಮತ ಕೇಳಲು ಬರುವ ರಾಜಕಾರಣಿಗಳು, ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರ ಜತೆ ಪ್ರಾಮಾಣಿಕವಾದ ಬೇಡಿಕೆ ಇಡುವವರೂ ಇದ್ದಾರೆ. ಉತ್ತಮರನ್ನು ಬೆನ್ನುತಟ್ಟಿ ಹುರಿದುಂಬಿಸುವ, ವಾಮಮಾರ್ಗ ಹಿಡಿಯುವವರನ್ನು ಬೈದು ಕಳುಹಿಸುವ ಹಿರಿಯ ಕಿರಿಯರೂ ಇದ್ದಾರೆ ಎನ್ನುವುದು ಸಂತಸದ ಸಂಗತಿ.
ಸಹಕಾರ ಸಂಘದ ಮಾದರಿ ಚುನಾವಣೆ:
ಗ್ರಾಪಂ ಚುನಾವಣೆಯನ್ನು ಕೆಲವರಷ್ಟೆ ಆರೋಗ್ಯಕರ ಪೈಪೋಟಿ ಎಂದು ಭಾವಿಸಬಹುದು. ಉಳಿದಂತೆ ವಿರಸಗಳು ಶಾಶ್ವತವಾಗಬಹುದು. ಹೀಗಾಗಿ ಈ ಚುನಾವಣೆಗಳು ಸಹಕಾರ ಸಂಘದ ಮಾದರಿಯಲ್ಲಿ ನಡೆಯಬೇಕು. ಕೆಟಗರಿವಾರು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಅಷ್ಟೂ ವಿಭಾಗಕ್ಕೆ ಗ್ರಾಪಂ ವ್ಯಾಪ್ತಿಯ ಎಲ್ಲರೂ ಮತ ಚಲಾಯಿಸಬೇಕು. ಯಾರು ಅಧಿಕ ಮತಗಳನ್ನು ಪಡೆಯುತ್ತಾರೊ ಅಂಥವರನ್ನು ಸದಸ್ಯರೆಂದು ಎಂದು ಘೋಷಿಸಬೇಕು ಎನ್ನುತ್ತಾರೆ ಓರ್ವ ಗ್ರಾಪಂ ಅಭ್ಯರ್ಥಿ.
ಚುನಾವಣಾ ಆಯೋಗ ಚಿಂತನೆ ನಡೆಸಲಿ:
ಸಹಕಾರಿ ತತ್ವದ ವ್ಯವಸ್ಥೆಯಲ್ಲಿರುವಂತೆ ಚುನಾವಣೆ ನಡೆದರೆ ಊರು-ಮನೆಯಲ್ಲಿ ಗುಂಪುಗಾರಿಕೆ, ದ್ವೇಷಕ್ಕೆ ಆಸ್ಪದವಿರುವುದಿಲ್ಲ. ಊರಲ್ಲೂ ಜಿದ್ದಾಜಿದ್ದಿ ಬೆಳೆಯುವುದಿಲ್ಲ. ಚುನಾವಣಾ ಆಯೋಗ ಈ ದಿಕ್ಕಿನಲ್ಲಿ ಚಿಂತನೆ ನಡೆಸುವುದು ಸೂಕ್ತ. ಇಲ್ಲದಿದ್ದಲ್ಲಿ ಈ ಚುನಾವಣೆಯಿಂದಲೇ ಸ್ನೇಹಿತರು, ಸಂಬಂಧಿಕರಲ್ಲಿ ಭಿನ್ನಾಭಿಪ್ರಾಯ ಹುಟ್ಟು ಹಾಕಿದಂತಾಗಬಹುದು ಎನ್ನುತ್ತಾರೆ ಇನ್ನೋರ್ವ ಗ್ರಾಪಂ ಅಭ್ಯರ್ಥಿ