

ಮೈಸೂರು: ಸಾರ್ವಜನಿಕವಾಗಿ ಬಳಕೆಯಾಗುವ ಕೊಳವೆಬಾವಿ, ಶುದ್ಧ ಕುಡಿಯುವ ನೀರು ಘಟಕಗಳ ಅಕ್ಕಪಕ್ಕ ಸ್ವಚ್ಛತೆ ಕಾಪಾಡಿ ನೀರು ಕಲುಷಿತವಾಗದಂತೆ ಎಚ್ಚರ ವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಿ.ನರಸೀಪುರ ತಾಲೂಕಿನ ಸೋಸಲೆ, ಬೆನಕನಹಳ್ಳಿ, ದೊಡ್ಡೇಬಾಗಿಲು ಗ್ರಾ.ಪಂ.ವ್ಯಾಪ್ತಿಯ ಹೊರಳಹಳ್ಳಿ, ಕೊಳತ್ತೂರು, ಚಿದರವಳ್ಳಿ ಹಾಗೂ ಉಕ್ಕಲಗೆರೆ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಮೊದಲ ಆದ್ಯತೆ ವಹಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವಂತಹ ಕೊಳವೆ ಬಾವಿಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಜಾನುವಾರು ನೀರು ಕುಡಿಯುವ ತೊಟ್ಟಿಗಳ ಹತ್ತಿರ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡದೆ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ನೀರಿನ ಟ್ಯಾಂಕ್, ಬೋರ್‌ವೆಲ್‌ಗಳ ಸ್ವಚ್ಛತೆ ಹಾಗೂ ಶುದ್ಧತೆಗಾಗಿ ನೀರಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ನೀರು ಬಿಡುವ ಅವಧಿ, ಎಷ್ಟು ಮನೆಗಳಿವೆ ಎಂಬ ಮಾಹಿತಿ ಸಂಗ್ರಹಿಸಿ, ನೀರಿನ ಶುದ್ಧತೆ ಬಗ್ಗೆ ನೀರುಗಂಟಿ ಸಿಬ್ಬಂದಿಗೆ ತರಬೇತಿ ನೀಡಿದ್ದು, ಅದರಂತೆ ನೀರು ಬಿಡಬೇಕು. ಆಶಾ ಕಾರ್ಯಕರ್ತೆಯರು ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಅರಿವು ಮೂಡಿಸಬೇಕು. ಕುಡಿಯುವ ನೀರನ್ನು ಕುದಿಸಿ ಆರಿಸಿ ಬಳಸಲು ಜಾಗೃತಿ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ (ಆಡಳಿತ) ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಂಜಿತ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ, ಸಹಾಯಕ ನಿರ್ದೇಶಕರು (ಗ್ರಾ.ಉ.) ಶಶಿಕುಮಾರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕೈಲಾಶ್ ಮೂರ್ತಿ, ಜೆಇ ಮಂಜುನಾಥ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇನ್ನಿತರರಿದ್ದರು.