

ಹೊಸಪೇಟೆ: ನಗರದ ಡಿ. ದೇವರಾಜು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಜಿ.ಪಂ. ಸಿಇಒ ಬಿ.ಸದಾಶಿವ ಪ್ರಭು ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.
ವಸತಿ ನಿಲಯದಲ್ಲಿ ತಯಾರಿಸಲಾಗುತ್ತಿದ್ದ ಬೆಳಗಿನ ತಿಂಡಿಯ ವಿವರ ಪಡೆದು ಚಹಾ ಸೇವಿಸಿ ಗುಣಮಟ್ಟವನ್ನು ಪರೀಕ್ಷಿಸಿದರು. ಅಲ್ಲದೇ, ತರಕಾರಿ ಸಂಗ್ರಹ, ಅಡುಗೆ ಕೋಣೆ, ಕುಡಿಯಲು ಮತ್ತು ಅಡುಗೆಗೆ ಬಳಸುವ ನೀರಿನ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿದರು. ವಸತಿ ನಿಲಯದ ಸ್ಚಚ್ಛತೆಗೆ ತೃಪ್ತಿ ವ್ಯಕ್ತಪಡಿಸಿದರೂ, ಇನ್ನೂ ಹೆಚ್ವಿನ ಸ್ವಚ್ಛತೆಗೆ ಗಮನ ಹರಿಸಲು ಸೂಚಿಸಿದರು.
ಇಲಾಖೆ ನಿಗಧಿಪಡಿಸಿರುವಂತೆ ವಿದ್ಯಾರ್ಥಿಗಳಿಗೆ ರುಚಿ ಮತ್ತು ಶುಚಿಯಾಗಿ ಆಹಾರ ಪೂರೈಸಬೇಕು. ದಾಸ್ತಾನು ಪುಸ್ತಕವನ್ನು ನಿಯಮಿತವಾಗಿ ಬರೆಯಬೇಕು ಎಂದು ವಾರ್ಡನ್‌ಗೆ ನಿರ್ದೇಶಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಆಲಿಸಿ, ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡನ್ ಅಶ್ವಿನಿ ಲಟ್ಟಿ ಇದ್ದರು.