

ಕೆ.ಎಂ.ದೊಡ್ಡಿ: ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸದಿದ್ದರೆ ನನ್ನಂತಹ ಲಕ್ಷಾಂತರ ವ್ಯಕ್ತಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದರು ಎಂದು ಜೆಎಸ್‌ಎಸ್ ಮಹಾ ವೈದ್ಯಕೀಯ ಸಂಸ್ಥೆಯ ವೈದ್ಯ ಡಾ.ಎಂ.ಭಾನುಕುಮಾರ್ ಹೇಳಿದರು.
ಇಲ್ಲಿನ ಭಾರತೀ ಪ್ರೌಢಶಾಲೆ ವತಿಯಿಂದ ನಿವೃತ್ತ ಮುಖ್ಯ ಶಿಕ್ಷಕ ಎಚ್.ಕೆಂಡೇಗೌಡ ಅವರ ಸ್ಮರಣಾಥರ್ವಾಗಿ ಇತ್ತೀಚೆಗೆ ಆಯೋಜಿಸಿದ್ದ 46ನೇ ಜಿಲ್ಲಾ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದ್ದರ ಫಲವಾಗಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಶರವೇಗದಲ್ಲಿ ಬೆಳೆದಿದ್ದು, ಒಂದು ವಿಶ್ವವಿದ್ಯಾಲಯದ ರೂಪದಲ್ಲಿ ಮಾರ್ಪಡಿಸಲಾಗಿದೆ. ಈಗ ಅವರ ಪುತ್ರ ಮಧು ಜಿ.ಮಾದೇಗೌಡ ಮತ್ತು ಮೊಮ್ಮಗ ಆಶಯ್ ಮಧು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿ, ನಗರ ಪ್ರದೇಶದಲ್ಲಿ ದುಬಾರಿ ಹಣ ನೀಡಿ ವ್ಯಾಸಂಗ ಮಾಡಲು ಸಾಧ್ಯವಾಗದ್ದನ್ನು ಅರಿತು ಹಳ್ಳಿಗಾಡಿನ ವಿದ್ಯಾರ್ಥಿಗಳಿಗಾಗಿ ದಿವಂಗತ ಜಿ.ಮಾದೇಗೌಡ ಶಿಕ್ಷಣ ಸಂಸ್ಥೆ ತೆರೆದು ಲಕ್ಷಾಂತರ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಗಳಿಸಲು ಕಾರಣರಾಗಿದೆ ಎಂದರು.
ಮೈಸೂರು ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಎಚ್.ಎಂ.ವಸಂತಮ್ಮ, ಸಾಹಿತಿ ರೋಷನ್ ಚೋಪ್ರ, ಮುಖ್ಯ ಶಿಕ್ಷಕ ಪಿ.ರಾಜೇಂದ್ರರಾಜೇ ಅರಸ್, ನಿವೃತ್ತ ಮುಖ್ಯಶಿಕ್ಷಕ ಎಂ.ಮಾಯಪ್ಪ, ನಿವೃತ್ತ ಶಿಕ್ಷಕ ಎಂ.ಎಸ್.ಶಿವಣ್ಣ, ಬಿ.ಜಿ.ಶಂಕುತಲಾ, ಕೆ.ಎಸ್.ಪ್ರಕಾಶ್ ಸೇರಿದಂತೆ ಹಲವರಿದ್ದರು.