ಪದವಿ ಪ್ರವೇಶ ಶುಲ್ಕ ಪಾವತಿ

Hrr15Drm3
Published on

ಹರಿಹರ: ಸಿಇಟಿ, ಜೆಇಇ ಪರೀಕ್ಷೆ ಮೂಲಕ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪದವಿ ಮುಗಿಯುವವರೆಗಿನ ಪ್ರವೇಶ ಶುಲ್ಕವನ್ನು ಇನ್​ಸೈಟ್ಸ್ ಸಂಸ್ಥೆಯಿಂದ ಭರಿಸಲಾಗುವುದೆಂದು ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ಕುಮಾರ್ ಘೊಷಿಸಿದರು.

ನಗರದ ಡಿಆರ್​ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಇನ್​ಸೈಟ್ಸ್ ಐಎಎಸ್ ಸಂಸ್ಥೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಐಎಎಸ್, ಕೆಎಎಸ್ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ ಎತ್ತರಕ್ಕೆ ಬೆಳೆಯಬೇಕೆಂಬ ಹಂಬಲ, ಸ್ವಾಭಿಮಾನವಿರುವುದು ಮುಖ್ಯ. ಕೀಳರಿಮೆಯಿಂದ ದೂರವಿದ್ದು ಶ್ರಮಪಟ್ಟರೆ ಐಎಎಸ್, ಕೆಎಎಸ್ ಅಥವಾ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸುವುದು ಕಷ್ಟಸಾಧ್ಯವಲ್ಲ ಎಂದರು.

ಜ್ಞಾನದ ಬಲದಿಂದ ಬಡತನ ಹಾಗೂ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ. ದೇಶದಲ್ಲಿ ಬಡವರ ಹಾಗೂ ಶೋಷಿತರ ಸಂಖ್ಯೆ ಅಧಿಕವಾಗಿದೆ. ಛಲ ಹಾಗೂ ಗುರಿ ಇದ್ದರೆ ಸಾಧಿಸಬಹುದು ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಸಂವಿಧಾನವು ದೇಶದ ಎಲ್ಲ ಜಾತಿ, ಜನಾಂಗದವರಿಗೂ ಸಮಾನ ಅವಕಾಶ ನೀಡಿದೆ. ಇದರ ಈ ಸೌಲಭ್ಯವನ್ನು ಬಳಸಿಕೊಂಡು ಯುವಜನರು ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕೆಂದರು.

ಪ್ರಾಚಾರ್ಯ ರಾಜಶೇಖರಯ್ಯ ಮಾತನಾಡಿ, ಡಿಆರ್​ಎಂ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಹೊಸ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ವಾಚಿಸಲಾಯಿತು. ಉಪನ್ಯಾಸಕ ಡಿ. ಶಿವಮೂರ್ತಿ, ಹಿರಿಯ ಪತ್ರಕರ್ತ ಬಿ. ಮಗ್ದುಮ್ ಮಾತನಾಡಿದರು. ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥಿಸಿದರು. ಬಿ.ಜಿ. ಸಿದ್ದಪ್ಪ ಸ್ವಾಗತಿಸಿದರು. ಕೆ.ಎಸ್. ಪುಷ್ಪ ನಿರೂಪಿಸಿದರು. ಉಪನ್ಯಾಸಕ ಚಂದ್ರನಾಯಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net